ಬೆಂಗಳೂರು/ಶಿವಮೊಗ್ಗ : ದುಬಾರಿ ಬೆಲೆಯ ಕಾರುಗಳನ್ನು ಕ್ಷಣಾರ್ಧದಲ್ಲಿ ಕದ್ದು ನಂಬರ್ ಪ್ಲೇಟ್ ಬದಲಾಯಿಸಿ ಸಾರ್ವಜನಿಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಕಳ್ಳನನ್ನು ಪುಲಕೇಶಿ ನಗರ ಪೊಲೀಸರು ಸೆರೆಹಿಡಿದಿದ್ದಾರೆ. ಮುಳಬಾಗಿಲು ಮೂಲದ ಮೊಹಮ್ಮದ್ ಫೈರೋಜ್ ಪಾಷಾ ಬಂಧಿತ ಆರೋಪಿ. ಈತನಿಂದ 20 ಲಕ್ಷ ರೂ. ಮೌಲ್ಯದ ಮಾರುತಿ ಬಲೆನೊ ಕಾರು, ಮಾರುತಿ ಈಕೋ ಹಾಗೂ ಮಿನಿ ಟೆಂಪೋವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡಿ.ಜೆ.ಹಳ್ಳಿಯ ವೆಂಕಟಾಪುರದಲ್ಲಿ ವಾಸವಾಗಿದ್ದ ಮೊಹಮ್ಮದ್ ಜೊತೆಗೆ ವ್ಯವಸ್ಥಿತ ಗ್ಯಾಂಗ್ ಕಾರ್ಯ ನಿರ್ವಹಿಸಿದ್ದು, ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಮಾರಾಟ: ಸಾರ್ವಜನಿಕ ಪ್ರದೇಶಗಳಲ್ಲಿ ನಿಲ್ಲಿಸಿದ್ದ ಐಷಾರಾಮಿ ಕಾರುಗಳನ್ನು ಸುಲಭವಾಗಿ ಕಳ್ಳತನ ಮಾಡುತ್ತಿದ್ದ ಆರೋಪಿ ಓಎಲ್ಎಕ್ಸ್ಗೆ ಹೋಗಿ ಮಾರಾಟವಾಗುವ ಕಾರಿನ ನೋಂದಣಿ ಸಂಖ್ಯೆಯನ್ನು ತೆಗೆದುಕೊಂಡು ಕದ್ದ ಕಾರಿಗೆ ಬದಲಾಯಿಸುತ್ತಿದ್ದ. ಬಳಿಕ ಗ್ರಾಹಕರನ್ನು ಸಂಪರ್ಕಿಸಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಅಸಲಿ ದಾಖಲಾತಿಯಂತೆ ನಕಲಿ ದಾಖಲೆ ಸೃಷ್ಟಿಸಿ ಮಾಲೀಕನ ಹೆಸರಿನಲ್ಲಿ ಸಹಿ ಹಾಕುತ್ತಿದ್ದ. ತ್ವರಿತವಾಗಿ ಹಣ ನೀಡುವಂತೆ ಒತ್ತಡ ಹಾಕುತ್ತಿರಲಿಲ್ಲ. ಇದರಿಂದ ಆರೋಪಿ ಮೇಲೆ ಸಾರ್ವಜನಿಕರಿಗೆ ನಂಬಿಕೆ ಹುಟ್ಟುವಂತೆ ಮಾಡಿದ್ದ. ದೆಹಲಿ ಹಾಗೂ ಶಿವಮೊಗ್ಗದಲ್ಲಿ ಕಾರು ಹಾಗೂ ಟೆಂಪೋ ಕಳ್ಳತನ ಮಾಡಿದ ಆರೋಪದಡಿ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೆಲಸಕ್ಕಿದ್ದ ಜ್ಯುವೆಲ್ಲರಿಯಿಂದ ₹58 ಲಕ್ಷ ಮೌಲ್ಯದ ಆಭರಣ ಕದ್ದ ಯುವತಿ ಸೆರೆ: ಸಿಸಿಟಿವಿ ದೃಶ್ಯ
ಡೆಲಿವರಿ ಬಾಯ್ ಸುಲಿಗೆ: ಡೆಲಿವರಿ ಬಾಯ್ ಬಳಿ ಸುಲಿಗೆ ಮಾಡಿದ್ದ ನಾಲ್ಕು ಮಂದಿ ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಾಂತವೀರ, ಕರಿಯ, ದಿನೇಶ್ ಹಾಗೂ ಸುಮಂತ್ ಬಂಧಿತರು. ಕಳೆದ ತಿಂಗಳ 20ರಂದು ಡೆಲಿವರಿ ಬಾಯ್ ನಿಲೇಶ್ ಎಂಬಾತನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ್ದರು. ಚಾಕು ತೋರಿಸಿ ಹೆದರಿಸಿ, ಆತನ ಬಳಿ ಮೊಬೈಲ್ ಹಾಗೂ 2,500 ರೂ. ಹಣ ಸುಲಿದಿದ್ದರು. ಶಾಂತವೀರ ವಿರುದ್ಧ ಹಲವು ಠಾಣಾ ವ್ಯಾಪ್ತಿಯಲ್ಲಿ ಸುಲಿಗೆ ಮಾಡಿರುವ ಆರೋಪವಿದೆ. ಬಂಧಿತರಿಂದ ಮೂರು ಬೈಕ್, ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ: ಹಳೇ ವೈಷಮ್ಯಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಹಳೇ ದ್ವೇಷಕ್ಕೆ ಮಾರಣಾಂತಿಕ ಹಲ್ಲೆ: ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದವನಿಗೆ ಭದ್ರಾವತಿ ನ್ಯಾಯಾಲಯ 4 ವರ್ಷ ಸಾದಾ ಕಾರಾಗೃಹ ಹಾಗೂ 25 ಸಾವಿರ ರೂ. ದಂಡ ವಿಧಿಸಿದೆ. ಭದ್ರಾವತಿ ಪಟ್ಟಣದ ಸೀಗೆಬಾಗಿ ಗ್ರಾಮದ ಚೇತನ್ ಎಂಬುವರ ದೊಡ್ಡಮ್ಮನೊಂದಿಗೆ ಶಿವರುದ್ರಪ್ಪ ಎಂಬಾತ ಹಳೇ ದ್ವೇಷವಿದ್ದ ಕಾರಣ ಜಗಳ ಮಾಡಿದ್ದಾನೆ. ಈ ವೇಳೆ ಗಲಾಟೆ ಬಿಡಿಸಲು ಹೋದ ಚೇತನ್ ಎಂಬಾತನಿಗೆ ಮನುಸಿಂಗ್ ಅಲಿಯಾಸ್ ಮನು ಎಂಬವನು ಮಚ್ಚಿನಿಂದ ತಲೆಗೆ ಮತ್ತು ಕೈ ಬೆರಳಿಗೆ ಹಲ್ಲೆ ನಡೆಸಿದ್ದ. ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಅಂದಿನ ತನಿಖಾಧಿಕಾರಿ ಭರತ್ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಭದ್ರಾವತಿಯ ನಾಲ್ಕನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ವೈ.ಶಶಿಧರ್, ಆರೋಪಿ ಮನುಸಿಂಗ್ (20)ಗೆ 4 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲವಾದ್ರೆ, ಹೆಚ್ಚುವರಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ನೀಡಿ ಆದೇಶಿಸಿದ್ದಾರೆ.