ಬೆಂಗಳೂರು: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್ ಮಟ್ಟದ ಜಾಲವನ್ನ ಮಟ್ಟ ಹಾಕುವಲ್ಲಿ ಕೇಂದ್ರ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಇರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ಬೆನ್ನತ್ತಿದ್ದಾರೆ. ಶೇಷಾದ್ರಿಪುರಂ ಠಾಣೆಯ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ತಂಡ ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವನ್ನ ಮಟ್ಟಹಾಕಿ ಆರೋಪಿಗಳನ್ನ ಬಂಧಿಸಿದ್ದಾರೆ.
ಜ್ಙಾನಶೇಖರ್, ಸಿದ್ದುನಾಥ, ನಾಗನಾಥ, ಚಂದ್ರಕಾಂತ್ ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ಓರ್ವ ನಗರದ ಶೇಷಾದ್ರಿಪುರಂ ಬಳಿ ಇರುವ ಓಂ ಶಕ್ತಿ ದೇವಸ್ಥಾನದ ಹಿಂಭಾಗದ ಮೈದಾನದಲ್ಲಿ ಆಟೋ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ. ಪ್ರಮುಖ ಆರೋಪಿ ಜ್ಞಾನಶೇಖರ್ ನ ಬೆನ್ನತ್ತಿ ವಿಚಾರಣೆಗೆ ಒಳಪಡಿಸಿದಾಗ ಆತ ತನಗೆ ಗಾಂಜಾ ಪೂರೈಕೆ ಮಾಡ್ತಿದ್ದ ಸಿದ್ದುನಾಥ ಲಾವಟೆ ಎಂಬಾತನ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿ ಆಧಾರದ ಮೇರೆಗೆ ಸಪ್ಟೆಂಬರ್ 6 ರಂದು ಮಾದನಾಯಕನಹಳ್ಳಿ ಬಳಿ ಸಿದ್ದುನಾಥ ಲಾವಟೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಆರೋಪಿಗಳು ಕಲಬುರಗಿಯಿಂದ ಗಾಂಜಾ ತಂದು ಅದನ್ನು ಶೇಖರಣೆ ಮಾಡಿಟ್ಟಿರುವ ವಿಚಾರವನ್ನು ಬಾಯ್ಬಿಟ್ಟಿದ್ದರು.
ಆ ನಂತರ ಆರೊಪಿಗಳ ಮಾಹಿತಿಯ ಆಧಾರದ ಮೇರೆಗೆ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಲಚ್ಚುನಾಯಕ ತಾಂಡಾ ಬಳಿ ಪೊಲೀಸರು ತೆರಳಿದಾಗ ಆರೋಪಿಗಳು ಗಾಂಜಾವನ್ನು ಕುರಿ ಫಾರ್ಮ್ ನ ನೆಲದಲ್ಲಿ ಗುಂಡಿ ಮಾಡಿ ಅಡಗಿಸಿಟ್ಟಿರುವ ವಿಚಾರ ಬಯಲಾಗಿದೆ. ಪ್ರಮುಖ ಆರೋಪಿ ಚಂದ್ರಕಾಂತ್ ಹೆಸರಿಗೆ ಮಾತ್ರ ಕುರಿ ಫಾರ್ಮ್ ನಡೆಸುತ್ತಿದ್ದು, ಒಳಗೊಳಗೆ ಗಾಂಜಾ ವ್ಯವಹಾರ ಮಾಡುತ್ತಿದ್ದರು. ಪೊಲೀಸರ ಸಮ್ಮುಖದಲ್ಲಿ ಸುಮಾರು ಐದು ಆಳದ ಅಂಡರ್ ಗ್ರೌಂಡ್ ತೆರೆದಾಗ ಅದರಲ್ಲಿ ಗಾಂಜಾ ಪ್ಯಾಕೆಟ್ ದೊರಕಿದ್ದು, ಸದ್ಯ ಆರೋಪಿಗಳಿಂದ ಗಾಂಜಾ ಜಪ್ತಿ ಮಾಡಿರುವ ವಿಚಾರಣೆಗೆ ಒಳಪಡಿಸಿದ್ದಾರೆ.
ಒಡಿಶಾದಲ್ಲಿ ಬೆಳೆಯುತ್ತಿದ್ದ ಗಾಂಜಾ: ತರಕಾರಿ ತರುವ ಸೋಗಿನಲ್ಲಿ ಸಾಗಣೆ
ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಒಡಿಶಾದಿಂದ ಗಾಂಜಾ ತರಿಸಿಕೊಳ್ಳುತ್ತಿದ್ದರು. ನಂತರ ಚಂದ್ರಕಾಂತ್ ಮತ್ತು ನಾಗನಾಥ್ ಸೂಚನೆಯಂತೆ ವಾಹನದಲ್ಲಿ ಆರೋಪಿಗಳು ತರಕಾರಿ ತರುವ ನೆಪದಲ್ಲಿ ತೆಲಂಗಾಣಕ್ಕೆ ಹೋಗ್ತಿದ್ರು. ಚಂದ್ರಕಾಂತ್ಗೆ ಬೇರೆ ಮಧ್ಯವರ್ತಿಗಳ ಮೂಲಕ ಗಾಂಜಾ ಪುರೈಕೆಯಾಗುತ್ತಿದ್ದು, ತರಕಾರಿ ತರುವ ಸೋಗಿನಲ್ಲಿ ಚಂದ್ರಕಾಂತ್ ಮತ್ತು ನಾಗನಾಥ್ ಈ ಗಾಂಜಾ ಪ್ಯಾಕೆಟ್ ಅನ್ನು ಗಡಿಭಾಗದ ಮೂಲಕ ಕಲಬುರಗಿಗೆ ತರಿಸಿ ಕುರಿಫಾರ್ಮ್ ನ ಅಂಡರ್ ಗ್ರೌಂಡ್ನಲ್ಲಿ ಇಟ್ಟು ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಬಂಧಿತ ಆರೋಪಿಗಳಿಂದ ಒಟ್ಟು 1,352 ಕೆ. ಜಿ. 300ಗ್ರಾಂ ಗಾಂಜಾ ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.