ಬೆಂಗಳೂರು: ಖಾಸಗಿ ಶಾಲಾ ಮಂಡಳಿ ಒಕ್ಕೂಟದ(ಕ್ಯಾಮ್ಸ್) ಕಾರ್ಯದರ್ಶಿ ಶಶಿಕುಮಾರ್ ಮೇಲಿನ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಸಿದ್ದ 12 ಜನ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ತನಿಖೆ ನಡೆಸಲು ಡಿಸಿಪಿ ವಿನಾಯಕ್ ಪಾಟೀಲ್ ಆದೇಶಿಸಿದ್ದಾರೆ.
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮ ಮನೆಯ ಮುಂದೆ ಕಾರು ನಿಲ್ಲಿಸಿ, ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದ ನಾಲ್ಕು ಜನ ಅಪರಿಚಿತರು ಏಕಾಏಕಿ ಲಾಂಗ್‌ನಿಂದ ದಾಳಿಗೆ ಮುಂದಾಗಿದ್ದರು. ಈ ಸಂಬಂಧ ಶಶಿಕುಮಾರ್ ನೀಡಿದ ದೂರಿನ ಮೇರೆಗೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೋಕಾ ಕಾಯ್ದೆಯಡಿ ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಶೇಖರಿಸಿ ಉಪಯೋಗಿಸಿದ ಪ್ರಕರಣ ದಾಖಲಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಕಳೆದ ಆಗಸ್ಟ್‌ನಲ್ಲಿ 12 ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ಆತ್ಮಹತ್ಯೆಗೆ ಪ್ರಚೋದನೆ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಇನ್ನಿತರ ಆರೋಪಿಗಳು ಕೊಲೆ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.
ಬಹುತೇಕ ಎಲ್ಲಾ ಆರೋಪಿಗಳಿಗೆ ಅಪರಾಧ ಹಿನ್ನೆಲೆ ಇದ್ದು, ಪದೇ ಪದೆ ದುಷ್ಕೃತ್ಯಗಳಲ್ಲಿ ಪಾಲ್ಗೊಂಡು ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುತ್ತಿದ್ದರು ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.