ಬೆಂಗಳೂರು: ಯಶವಂತಪುರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಮುಂದುವರೆಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಇಂದು ದೊಡ್ಡಗೌಡರು ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ಕೆಂಗೇರಿ ಹೋಬಳಿಯಲ್ಲಿ ದೊಡ್ಡಗೌಡರ ಪ್ರಚಾರ ಕಾರ್ಯ ಪ್ರಾರಂಭಿಸಬೇಕಾಗಿತ್ತು. ಆದರೆ, ಮಳೆಯ ಕಾರಣ ದೇವೇಗೌಡರು ಇನ್ನೂ ಪ್ರಚಾರಕ್ಕೆ ಆಗಮಿಸಿಲ್ಲ. ಹೀಗಾಗಿ ಜವರಾಯಿಗೌಡ ತಮ್ಮ ಬೆಂಬಲಿಗರೊಂದಿಗೆ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ.
ಜವರಾಯಿಗೌಡರು ಕೆಂಗೇರಿ ಚರ್ಚ್ ಬಳಿ ಹೋಗಿ ಮತಯಾಚನೆ ಮಾಡಿದರು. ಬಳಿಕ ಮನೆ ಮನೆಗೆ ತೆರಳಿ ಮತ ಬೇಟೆ ನಡೆಸಿದರು. ಇತ್ತ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಪರ ಕಂದಾಯ ಸಚಿವ ಆರ್. ಅಶೋಕ್ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ ಜೆ ಪುಟ್ಟಸ್ವಾಮಿ ಪ್ರಚಾರಕ್ಕಿಳಿದರು. ಯಶವಂತಪುರ ಕ್ಷೇತ್ರದ ಮುದ್ದಯ್ಯನಪಾಳ್ಯದಲ್ಲಿ ರೋಡ್ ಶೋ ಮತ್ತು ಬೈಕ್ ಜಾಥಾ ಮಾಡುವ ಮೂಲಕ ಮತಯಾಚನೆ ಮಾಡಿದರು.
ಮುದ್ದಯ್ಯನಪಾಳ್ಯದಿಂದ ಹೇರೋಹಳ್ಳಿಯವರೆಗೆ ಬೈಕ್ ಜಾಥಾ ನಡೆಸಿದರು. ಹೇರೋಹಳ್ಳಿ ವಾರ್ಡ್ನ ಗಿಡದಕೊನೇನಹಳ್ಳಿಯಲ್ಲಿ ಪ್ರಚಾರದ ವೇಳೆ ಹಕ್ಕುಪತ್ರ ನೀಡುವಂತೆ ಸಾರ್ವಜನಿಕರು ಸಚಿವ ಆರ್.ಅಶೋಕ್ ಅವರಲ್ಲಿ ಬೇಡಿಕೆ ಇಟ್ಟರು. ಈ ವೇಳೆ ಕಂದಾಯ ಸಚಿವ ಆರ್.ಅಶೋಕ್, ಅಂದು ಜಾಗ ಉಳಿಸಿಕೊಟ್ಟವನು ನಾನೇ, ಮೂರು ತಿಂಗಳ ಹಿಂದೆ ಮಂತ್ರಿ ಆಗಿದ್ದೇನೆ, ಅದೇ ಇಲಾಖೆಗೆ ಮಂತ್ರಿ ಆಗಿದ್ದೇನೆ. ಚುನಾವಣೆ ಮುಗಿದ ಬಳಿಕ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.