ಬೆಳಗಾವಿ : ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಗೊಳಿಸುವುದರ ವಿರುದ್ದ, ನವಂಬರ್ 26 ನೇ ಗುರುವಾರದಂದು ಬೆಂಗಳೂರಿನಲ್ಲಿರುವ ಕೇಂದ್ರ ಉದ್ದಿಮೆಗಳ ಜಂಟಿ ಕ್ರಿಯಾ ಸಮಿತಿಯ ಎಚ್.ಎ.ಎಲ್. ಕಾರ್ಮಿಕ ಸಂಘ, ಬಿ.ಇ.ಎಲ್ ವರ್ಕರ್ ಫೋರಂ, ಬಿ.ಇ.ಎಲ್ ವರ್ಕರ್ಸ್ ಯೂನಿಯನ್, ಬಿ.ಇ.ಎಮ್.ಎಲ್ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯು ದೇಶಾದ್ಯಂತ ಎಲ್ಲಾ ಕಾರ್ಮಿಕ ಸಂಘಟನೆಗಳ ಜೊತೆಗೂಡಿ ಒಂದು ದಿನದ ಅಖಿಲ ಭಾರತ ಮಟ್ಟದ ಮುಷ್ಕರವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಜಂಟಿ ಕ್ರಿಯಾ ಸಮಿತಿಯ ಸಂಚಾಲಯ ಹಾಗೂ ಬಿ.ಇ.ಎಂ.ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಬಿಇಎಂಎಲ್ ಕರ್ನಾಟಕದಲ್ಲಿರುವ ಕೇಂದ್ರೋದ್ಯಮವಾಗಿದ್ದು, ಇದು ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿದೆ. ಬೆಂಗಳೂರು, ಕೆಜಿಎಫ್, ಮೈಸೂರು ಹಾಗೂ ಪಾಲಕ್ಕಾಡ್ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಏಷ್ಯಾದಲ್ಲಿಯೇ ಅತೀ ದೊಡ್ಡದಾದ ಸಂಶೋಧನೆ ಹಾಗೂ ಅಭಿವೃದ್ದಿ ಕೇಂದ್ರವನ್ನು ಹೊಂದಿರುವ ಬಿಇಎಂಎಲ್ ಸಂಸ್ಥೆಯ 2019-20 ರ ವಾರ್ಷಿಕ ವಹಿವಾಟು ರೂ 3028 ಕೋಟಿ ಯಾಗಿದ್ದು ರೂ 63.38 ಕೋಟಿಗಳಷ್ಟು ನಿವ್ವಳ ಲಾಭ ಹೊಂದಿರುವ ಸಂಸ್ಥೆಯಾಗಿದೆ.
ಸತತ 5 ವರ್ಷಗಳಿಂದ ಲಾಭಗಳಿಸುತ್ತಿರುವ ಸಂಸ್ಥೆಯನ್ನು ಸರ್ಕಾರ ಖಾಸಗೀಕರಣಗೊಳಿಸಲು ಹೊರಟಿದೆ. ದೇಶದ ಸಂಪತ್ತನ್ನು ಬಹಳ ಕಡಿಮೆ ಮೊತ್ತಕ್ಕೆ ಖಾಸಗಿಯವರ ಪಾಲಾಗುವುದನ್ನು ಸಂಸ್ಥೆಯ ಉದ್ಯೋಗಿಗಳು ಮತ್ತು ಕಾರ್ಮಿಕ ಸಂಘಟನೆಗಳು ವಿರೋಧಿಸಿ ಹಲವಾರು ಹೋರಾಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಆದ್ರೆ
ಈ ಎಲ್ಲಾ ಹೋರಾಟಗಳು ಫಲಕಾರಿಯಾಗದೇ ಇರುವ ಹಿನ್ನಲೆಯಲ್ಲಿ ಎಲ್ಲಾ ಕೇಂದ್ರ ಸ್ವಾಮ್ಯದ ಉದ್ದಿಮೆಗಳ ಸಂಘಟನೆಗಳು ಜಂಟಿಯಾಗಿ ದೇಶಾದ್ಯಂತ ನವಂಬರ್ 26 ರಂದು ಪ್ರತಿಭಟನೆಯನ್ನು ನಡೆಸುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ದೊಮ್ಮಲೂರು ಶ್ರೀನಿವಾಸ ರೆಡ್ಡಿ ತಿಳಿಸಿದರು.