ಬೆಂಗಳೂರು: ಕೋವಿಡ್ ನಿರ್ವಹಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದ್ದು, ನಿರ್ವಹಣೆಗೆ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಔಷಧ ಖರೀದಿ, ಮಾಸ್ಕ್ ಕಡ್ಡಾಯ ಸೇರಿದಂತೆ ಎಲ್ಲ ವಿಷಯವನ್ನೂ ಸಮಿತಿ ನಿರ್ಧರಿಸಲಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲೇ ಉಪಸಮಿತಿ ರಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಆರೋಗ್ಯ, ವೈದ್ಯಕೀಯ, ಗೃಹ, ಡಿಸಿಎಂ ಸೇರಿ ಆರೋಗ್ಯ, ವೈದ್ಯಕೀಯ ಇಲಾಖೆ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಒಳಗೊಂಡ ಸಭೆ ನಡೆಸಲಾಯಿತು. ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮೂವರು ನಮ್ಮ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದ್ದವರು ನಿಧನರಾಗಿದ್ದಾರೆ. ಮೂವರೂ ಕೂಡ ಕೋವಿಡ್ನಿಂದಲೇ ಮೃತಪಟ್ಟರು ಎನ್ನಲಾಗಲ್ಲ. ಇತರ ಆರೋಗ್ಯ ಸಮಸ್ಯೆಗಳೂ ಅವರಿಗಿತ್ತು. ಹೃದಯ, ಕಿಡ್ನಿ, ಶ್ವಾಸಕೋಶ ಸಮಸ್ಯೆ, ಮಧುಮೇಹ ಹಾಗು ಬಿಪಿ ಇತ್ತು. ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವೈದ್ಯಕೀಯ ಇಲಾಖೆ ಪ್ರತ್ಯೇಕವಾಗಿ ಸಭೆ ನಡೆಸಿದೆ. ಈ ಬಗ್ಗೆ ಸಭೆ ನಡೆಸಿ ಸಲಹೆ ಪಡೆದಿದ್ದೇನೆ ಎಂದರು.
ಯಾವುದೇ ಕಾರಣಕ್ಕೂ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು. ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಇರಬಾರದು. ಇತರ ರೋಗ ಇರುವವರನ್ನೂ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆಗೆ ಒಳಪಡಿಸಬೇಕು. ಕೋವಿಡ್ಗೆ ಸಂಬಂಧಿಸಿದ ಚಿಕಿತ್ಸೆಯನ್ನೂ ಮಾಡಬೇಕು. ಔಷಧಿ ಕೊರತೆ ಆಗಬಾರದು, ಯಾರಿಗಾದರೂ ಅಗತ್ಯವಿದ್ದಲ್ಲಿ ವ್ಯಾಕ್ಸಿನ್ ಹಾಕಿ, ವ್ಯಾಕ್ಸಿನ್ ತೆಗೆದುಕೊಳ್ಳದವರಿಗೆ ವ್ಯಾಕ್ಸಿನೇಷನ್ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದರು.
ಶನಿವಾರದಿಂದ ಪ್ರತಿದಿನ 5 ಸಾವಿರ ಕೋವಿಡ್ ಪರೀಕ್ಷೆ: ರಾಜ್ಯದಲ್ಲಿ 92 ಜನರಿಗೆ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದೆ ಎಂದು ಗೊತ್ತಾಗಿದೆ. ಬೆಂಗಳೂರು ನಗರದಲ್ಲೇ 80 ಇದೆ. ಮೈಸೂರು 5, ಬಳ್ಳಾರಿ 3, ರಾಮನಗರ, ಮಂಡ್ಯದಲ್ಲಿ ತಲಾ 1 ಪಾಸಿಟಿವ್ ಇದೆ. 72 ಜನರಿಗೆ ಮನೆಯಲ್ಲೇ ಕ್ವಾರಂಟೈನ್ಗೆ ಸೂಚಿಸಿದ್ದು 20 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನ ಐಸಿಯುನಲ್ಲಿದ್ದಾರೆ. ಪ್ರತಿದಿನ 5 ಸಾವಿರ ಟೆಸ್ಟ್ಗೆ ತಾಂತ್ರಿಕ ಸಲಹಾ ಸಮಿತಿಯವರು ಹೇಳಿದ್ದಾರೆ. ರ‍್ಯಾಪಿಡ್ 1500 ಮತ್ತು ಆರ್ಟಿಪಿಸಿಆರ್ 3500 ಟೆಸ್ಟ್ ಸೇರಿ 5 ಸಾವಿರ ಟೆಸ್ಟ್ ಶನಿವಾರದಿಂದ ಆರಂಭಿಸಲಾಗುತ್ತದೆ.
ಮಾಸ್ಕ್ ಕಡ್ಡಾಯಗೊಳಿಸುವ ಪರಿಸ್ಥಿತಿ ಬಂದಿಲ್ಲ: ಗಡಿ ಭಾಗದಲ್ಲಿ ಹೆಚ್ಚು ತಪಾಸಣೆ ಮಾಡಬೇಕಿದೆ. ಕೋವಿಡ್ಗೆ ಯಾರೂ ಭಯಪಡಬೇಕಾದ ಅಗತ್ಯ ಇಲ್ಲ. ಆದರೆ ಎಚ್ಚರಿಕೆ ಕ್ರಮ ಅನುಸರಿಸಬೇಕು. ಜನಸಂದಣಿ ಇರುವ ಕಡೆ ಮಾಸ್ಕ್ ಧರಿಸಿ, 60 ವರ್ಷಕ್ಕೂ ಹೆಚ್ಚಿನ ವಯಸ್ಸಿನವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಸಲಹೆ ನೀಡುತ್ತಿದ್ದೇವೆ. ಆದರೆ ಮಾಸ್ಕ್ ಕಡ್ಡಾಯ ಮಾಡುವ ಪರಿಸ್ಥಿತಿ ಬಂದಿಲ್ಲ ಎಂದರು.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಡೆಡಿಕೇಟೆಡ್ ವಾರ್ಡ್ ಮೀಸಲಿಗೆ ಸೂಚಿಸಲಾಗಿದೆ. ಹೊಸ ವರ್ಷಾಚರಣೆ, ಕ್ರಿಸ್ ಮಸ್ ವೇಳೆ ಮಾಸ್ಕ್ ಧರಿಸಿ ಮುಂಜಾಗ್ರತಾ ಕ್ರಮ ವಹಿಸಿ ಎಂದು ಜನತೆಗೆ ಸಲಹೆ ನೀಡಿದ ಸಿಎಂ, ಸಂಭ್ರಮಾಚರಣೆಗೆ ಯಾವುದೇ ಮಾರ್ಗಸೂಚಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ, ಟೆಸ್ಟ್ ಕಿಟ್ ದರ ಇತ್ಯಾದಿ ಕುರಿತು ಸಂಪುಟ ಉಪ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ವ್ಯಾಕ್ಸಿನೇಷನ್ ಉಚಿತವೋ, ದರ ನಿಗದಿಯೋ ಎಂದು ಉಪಸಮಿತಿ ನಿರ್ಧರಿಸಲಿದೆ. ಕೋವಿಡ್ ನಿರ್ವಹಣೆಗೆ ಹಣಕಾಸಿನ ತೊಂದರೆ ಇಲ್ಲ. ಅಗತ್ಯ ಹಣಕಾಸು ಒದಗಿಸಲಾಗುತ್ತದೆ. ಶಾಲೆಗಳಲ್ಲಿ ಮಾಸ್ಕ್ ಹಾಕುವುದು ಉತ್ತಮ. ಆದರೆ ಕಡ್ಡಾಯಗೊಳಿಸುವ ಕುರಿತು ಸಂಪುಟ ಉಪ ಸಮಿತಿ ನಿರ್ಧರಿಸಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರತಿನಿತ್ಯ 1,500 ಕೋವಿಡ್ ಟೆಸ್ಟ್ ನಡೆಸಲು ಸೂಚನೆ: ಸಚಿವ ದಿನೇಶ್ ಗುಂಡೂರಾವ್