ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಬರದಿಂದ ಅಂದಾಜು ಒಟ್ಟು 30,432 ಕೋಟಿ ರೂ ಹಾನಿಯಾಗಿದ್ದು, NDRF ಮಾನದಂಡದ ಪ್ರಕಾರ 4,860.13 ಕೋಟಿ ರೂ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ (ಮೆಮೊರಾಡಂ) ಸಲ್ಲಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, 161 ತಾಲೂಕುಗಳನ್ನು ತೀವ್ರ ಬರ ಹಾಗೂ 34 ತಾಲೂಕುಗಳು ಸಾಧಾರಣ ಬರ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಅದಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬರ ಪರಿಹಾರ ಸಂಬಂಧ ಕೇಂದ್ರ ಸರ್ಕಾರಕ್ಕೆ ಮೆಮೊರಾಡಂ ಸಲ್ಲಿಸಲು ತೀರ್ಮಾನಿಸಲಾಗಿದೆ.
ರಾಜ್ಯದಲ್ಲಿ ಎದುರಾಗಿರುವ ಬರದಿಂದ ಅಂದಾಜು 30,432 ಕೋಟಿ ರೂ. ನಷ್ಟ ಆಗಿದೆ. ಈ ಪೈಕಿ ಎನ್ಡಿಆರ್ಎಫ್ ಮಾನದಂಡದ ಪ್ರಕಾರ 4,860.13 ಕೋಟಿ ರೂ. ಹಾನಿಯಾಗಿದೆ. ಬರದಿಂದ 39.74 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ 27,867.17 ಕೋಟಿ ಮೊತ್ತದ ಕೃಷಿ ಬೆಳೆ ನಷ್ಟವಾಗಿದೆ. ಇದರಲ್ಲಿ NDRF ಮಾನದಂಡದ ಪ್ರಕಾರ 3,824.67 ಕೋಟಿ ರೂ. ಹಾನಿಯಾಗಿದೆ ಎಂದು ತಿಳಿಸಿದರು.
ಬರದಿಂದ 2,565.7 ಕೋಟಿ ರೂ. ತೋಟಗಾರಿಕೆ ಬೆಳೆಗಳು ನಷ್ಟವಾಗಿದೆ. ಪಶು ಶಿಬಿರಕ್ಕಾಗಿ 104.33 ಕೋಟಿ ರೂ., 624 ಮೇವು ಬ್ಯಾಂಕ್ಗಾಗಿ 126.36 ಕೋಟಿ ರೂ., ಔಷಧಿಗಳಿಗಾಗಿ 25 ಕೋಟಿ ರೂ., ಮೇವು ಬೀಜ ಒದಗಿಸಲು 50 ಕೋಟಿ ರೂ. ಗ್ರಾಮೀಣ ಪ್ರದೇಶದಲ್ಲಿ 180 ದಿನಕ್ಕೆ ಕುಡಿಯುವ ನೀರು ಪೂರೈಸಲು 284.4 ಕೋಟಿ ರೂ. ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ 180 ದಿನಗಳಿಗೆ 213.98 ಕೋಟಿ ರೂ. ಪರಿಹಾರ ನೀಡಲು ಕೋರಲಾಗಿದೆ ಎಂದರು.
ಒಟ್ಟು 4,860.13 ಕೋಟಿ ರೂ. ಎನ್ಡಿಆರ್ಎಫ್ ಅಡಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗುವುದು. ಕಂದಾಯ ಸಚಿವರು ಎರಡು ದಿಗಳಲ್ಲಿ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಮೆಮೊರಾಡಂ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಪಂಪ್ ಸೆಟ್ ಅಕ್ರಮ ಸಕ್ರಮಕ್ಕೆ ಅಸ್ತು: 2015-2023ರವರೆಗೆ ಅಕ್ರಮವಾಗಿ ಅಳವಡಿಸಿದ ಕೃಷಿ ಪಂಪ್ಸೆಟ್ಗಳನ್ನು ಸಕ್ರಮವಾಗಿ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸೆ.22ರ ಬಳಿಕ ಅಕ್ರಮವಾಗಿ ಅಳವಡಿಸಿದ ಕೃಷಿ ಪಂಪ್ ಸೆಟ್ಗಳನ್ನು ಸಕ್ರಮಗೊಳಿಸಲಾಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಎಸ್ಕಾಂಗಳು 8 ವರ್ಷದಲ್ಲಿ ಅಕ್ರಮ ಐಪಿ ಸೆಟ್ಗಳಿಗೆ ಟ್ರಾನ್ಸ್ಫಾರ್ಮಾರ್, ವಿದ್ಯುತ್ ಕಂಬಿಗಳಿಗಾಗಿ 6,099 ಕೋಟಿ ಬಂಡವಾಳ ವೆಚ್ಚ ಮಾಡಿವೆ. ಈ ಐಪಿ ಸೆಟ್ಗಳ ಸಕ್ರಮ ಮಾಡಲು ಘಟನೋತ್ತರ ಅನುಮೋದನೆ ನೀಡಿದೆ. ಇನ್ನು ರೈತರು ಕೇಂದ್ರ ಸರ್ಕಾರದ ಕುಸಮ್ ಬಿ ಯೋಜನೆಯಡಿ ತಮ್ಮ ಪಂಪ್ ಸೆಟ್ಗಳನ್ನು ಸೋಲಾರ್ ವಿದ್ಯುತ್ ಚಾಲಿತ ಐಪಿ ಸೆಟ್ಗಳನ್ನಾಗಿ ಪರಿವರ್ತಿಸಲು ತಗುಲುವ ವೆಚ್ಚದಲ್ಲಿ ಶೇ.50 ರಾಜ್ಯ ಸರ್ಕಾರ ಸಹಾಯಧನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಶೇ.20ರಷ್ಟು ಫಲಾನುಭವಿಗಳು ವೆಚ್ಚ ಭರಿಸಲಿದ್ದು, ಉಳಿದ ಶೇ.30 ಕೇಂದ್ರ ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.
ಸರ್ಕಾರಿ ವಾಹನಗಳನ್ನು ಹಂತ ಹಂತವಾಗಿ ಸ್ಕ್ರ್ಯಾಪ್: ರಾಜ್ಯದಲ್ಲಿ ಸರ್ಕಾರಿ ವಾಹನಗಳಿಗೆ ಗುಜರಿ ನೀತಿ ತರಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. 15 ವರ್ಷ ಪೂರೈಸಿದ ಸರ್ಕಾರಿ ವಾಹನವನ್ನು ಹಂತ ಹಂತವಾಗಿ ಗುಜರಿಗೆ ಹಾಕಲು ಮತ್ತು ರಾಜ್ಯದಲ್ಲಿ 15 ವರ್ಷ ಪೂರೈಸಿದ 15,295 ಸರ್ಕಾರಿ ವಾಹನಗಳನ್ನು ನಾಶ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.
ಗುಜರಿ ನೀತಿಯಡಿ 2023-24ರಲ್ಲಿ ಮೊದಲ ಹಂತದಲ್ಲಿ 5,000 ಸರ್ಕಾರಿ ವಾಹನಗಳನ್ನು ನಾಶ ಪಡಿಸುತ್ತೇವೆ. ಪ್ರತಿ ವಾಹನಕ್ಕೆ 10 ಲಕ್ಷದಂತೆ 500 ಕೋಟಿ ರೂ. ವೆಚ್ಚ ಆಗಲಿದೆ. ಇದಕ್ಕೆ 100 ಕೋಟಿ ರೂ. ಕೇಂದ್ರ ಸರ್ಕಾರ ಪ್ರೋತ್ಸಾಹ ಧನ ನೀಡಲಿದೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಸಂಪುಟದ ಇತರೆ ಪ್ರಮುಖ ತೀರ್ಮಾನಗಳು:
- ಮಂಗಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಲು 49.50 ಕೋಟಿ ರೂ. ಪರಿಷ್ಕೃತ ಅಂದಾಜು ಅನುಮೋದನೆ.
- ಕೆಎಸ್‌ಎಸ್‌ಐಡಿಸಿ ವತಿಯಿಂದ ಏಳು ಕೈಗಾರಿಕಾ ವಸಾಹತು ಸ್ಥಾಪನೆ. ಚಿತ್ತಾಪುರ,ಕೋಡ್ಕಣಿ, ಕಣಗಾಲ, ಬದನಗುಪ್ಪೆ, ಇಂಡಿಯಲ್ಲಿ ಸ್ಥಾಪನೆಗೆ 144 ಎಕರೆ ಜಮೀನಿನಲ್ಲಿ 166 ಕೋಟಿ ರೂ. ಮಂಜೂರು. ಹುಬ್ಬಳ್ಳಿ ಮತ್ತು ಶಹಪೂರದಲ್ಲಿ, ಗದಗದಲ್ಲಿ ಭೂ ಸ್ವಾಧೀನ ಮಾಡಿ, ವಸಾಹತು ಸ್ಥಾಪನೆಗೆ ಮಂಜೂರು.
- ಲೋಕಾಯುಕ್ತದಲ್ಲಿ ಕೆಲಸ ನಿರ್ವಹಿಸುತ್ತಿರುವ 6 ಸರ್ಕಾರಿ ಅಭಿಯೋಜಕರ ಸೇವೆ ಒಂದು ವರ್ಷ ಮುಂದುವರಿಕೆಗೆ ಅನುಮೋದನೆ.
- ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರಿಗೆ ನಿವೃತ್ತಿ ವೇತನಕ್ಕೆ ಕಾಯ್ದೆ ತಿದ್ದುಪಡಿಗೆ ಅಸ್ತು. ಆರು ವರ್ಷ ಅವಧಿ ಪೂರ್ಣಗೊಳಿಸಿದ ಅಧ್ಯಕ್ಷರಿಗೆ ಮಾಸಿಕ 67,500 ರೂ., ಸದಸ್ಯರಿಗೆ ಮಾಸಿಕ 61,500 ರೂ. ಪಿಂಚಣಿ ನೀಡಲು ಸಂಪುಟ ಒಪ್ಪಿಗೆ.
- ಕಾನೂನು ಮಾಪನ ಇಲಾಖೆಯ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಅಸ್ತು.
- ಆಶಾಕಿರಣ ಯೋಜನೆಯಲ್ಲಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆಗೆ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ, ಮಂಡ್ಯ ಜಿಲ್ಲೆಯಲ್ಲಿ ಜಾರಿಗೆ 29.14 ಕೋಟಿ ರೂ. ಯೋಜನೆಗೆ ಅಸ್ತು.
- ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ 2.17 ಎಕರೆಯಲ್ಲಿ ಪ್ರಯಾಣಿಕರ ತಂಗುದಾಣ 67.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಘಟನೋತ್ತರ ಅಸ್ತು.
- ರಾಷ್ಟ್ರೀಯ ವಿಧಿವಿಜ್ಞಾನ ಸಂಸ್ಥೆ ಸ್ಥಾಪಿಸಲು ಧಾರವಾಡದಲ್ಲಿ 45.19 ಎಕರೆ ಜಮೀನು ನೀಡಲು ಸಂಪುಟ ಸಭೆ ಒಪ್ಪಿಗೆ. ಗುತ್ತಿಗೆ ಆಧಾರದಲ್ಲಿ ಜಮೀನು ನೀಡಲು ಒಪ್ಪಿಗೆ. ಕರ್ನಾಟಕದ ಮಕ್ಕಳಿಗೆ ಶೇ.25 ಪ್ರವೇಶ ಮೀಸಲಾತಿ ನೀಡಬೇಕು. ನಮ್ಮ ಪೊಲೀಸರಿಗೂ ಫಾರೆನ್ಸಿಕ್ನಲ್ಲಿ ಪ್ರಯೋಗಾಲಯದಲ್ಲಿ ಸೇವೆ ನೀಡುವ ಷರತ್ತಿನೊಂದಿಗೆ ಒಪ್ಪಿಗೆ.
- ಕೃಷಿಯಲ್ಲಿ ನವೋದ್ಯಮ ಆರಂಭಿಸಲು 10 ಕೋಟಿ ರೂ. ಮಂಜೂರು.
- ಪೊಲೀಸ್ ಇಲಾಖೆಗೆ 100 ಕೋಟಿ ಮೊತ್ತದಲ್ಲಿ ಹೊಸ ವಾಹನ ಖರೀದಿಗೆ ಅಸ್ತು.
- ಕಡಗರು ಎಂಬುದನ್ನು ಕೊಡವ ಎಂದು ಬದಲಾವಣೆ ಮಾಡಲು ಒಪ್ಪಿಗೆ.
- ಕೇಂದ್ರ ಹಿಂದುಳಿದ ವರ್ಗಗಳ (ಒಬಿಸಿ)ಪಟ್ಟಿಗೆ ಕುಂಚಿಟಿಗರ ಸಮುದಾಯ(ವರ್ಗ) ಸೇರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು.
ಇದನ್ನೂ ಓದಿ: ಬರಗಾಲದ ಎಫೆಕ್ಟ್: ಸರಳ, ಅದ್ಧೂರಿ ಎನ್ನುವ ಬದಲು ಸಾಂಪ್ರದಾಯಿಕ ದಸರಾ ಹೇಳಿಕೆಗೆ ಹೋಟೆಲ್ ಮಾಲೀಕರ ಸಂಘ ಒತ್ತಾಯ