ಬೆಂಗಳೂರು: ಹಿರಿಯ ನಾಯಕ ಎಸ್.ಎಂ ಕೃಷ್ಣ ಅವರು ಯಾವುದೇ ಸ್ಥಾನಮಾನದ ಆಪೇಕ್ಷೆ ಹೊಂದಿಲ್ಲ. ಸ್ಥಾನವನ್ನು ಮೀರಿದ ಬದುಕು ಅವರದ್ದಾಗಿದ್ದು, ಸಂದರ್ಭ ಬಂದಾಗ ಅವರ ಅನುಭವವನ್ನು ಬಿಜೆಪಿ ಬಳಸಿಕೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸದಾಶಿವ ನಗರದಲ್ಲಿರುವ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಎಸ್ಎಂಕೆಗೆ ಹುಟ್ಟುಹಬ್ಬದ ಶುಭ ಕೋರಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಎಸ್.ಎಂ. ಕೃಷ್ಣ ಮುತ್ಸದ್ದಿ ರಾಜಕಾರಣಿಗಳಲ್ಲಿ ಒಬ್ಬರು ಎಂದರು.
ಇನ್ನು ಲೋಕೋಪಯೋಗಿ ಇಲಾಖೆ ತುಂಡು ಗುತ್ತಿಗೆ ಗೋಲ್ಮಾಲ್ ಪ್ರಕರಣ ಗಮನಕ್ಕೆ ಬಂದಿದೆ. ಇದು ಇಂದು ನಿನ್ನೆಯದ್ದಲ್ಲ, ಪಿತ್ರಾರ್ಜಿತವಾಗಿ ಬಂದಿದೆ. ತುಂಡು ಗುತ್ತಿಗೆ ಜೊತೆ ಕಳ್ಳ ಬಿಲ್ಲು, ಸುಳ್ಳು ಲೆಕ್ಕವನ್ನೂ ಬರೆದಿದ್ದಾರೆ. ಸುಳ್ಳು ಲೆಕ್ಕ, ಕಳ್ಳ ಬಿಲ್ 1344 ಕೋಟಿ ರೂ. ಅವ್ಯವಹಾರವಾಗಿದೆ ಎಂದು ರವಿ ಆರೋಪಿಸಿದರು. ಈ ಬಗ್ಗೆ ನನಗೆ ಖಚಿತ ಮಾಹಿತಿ ಇದ್ದು, ಸಮಗ್ರ ತನಿಖೆ ನಡೆಸಬೇಕು. ಆಗ ಯಾರು ಯಾರು ಕಂಬಿ ಎಣಿಸಬೇಕು ಅನ್ನೋದು ನಿರ್ಧಾರ ಆಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಸಚಿವ ಜಿ. ಟಿ. ದೇವೇಗೌಡ ಸತ್ಯ ಹೇಳಿದ್ದಾರೆ. ಈ ಬಾರಿಯ ಚುನಾವಣೆ ಜಾತಿ, ಪಕ್ಷ, ಹಣ ಮೀರಿ ನಡೆದಿದೆ. ಜನರ ಬಾಯಲ್ಲಿ ಮೋದಿ ಮೋದಿ ಎಂದು ಕೇಳಿ ಬರ್ತಾ ಇತ್ತು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮುಂತಾದ ಕಡೆ ಮೋದಿ ಹೆಸರು ಕೇಳಿ ಬರ್ತಾ ಇತ್ತು. ಮಂಡ್ಯದಲ್ಲೂ ಕೂಡ ಬಹಿರಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದಾರೆ ಎಂದು ಸಿ ಟಿ ರವಿ ತಿಳಿಸಿದರು.
ಹಾಸನದಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ತುಮಕೂರಲ್ಲೂ ಕೂಡ ಕೆಲವರು ಒಳಗೆ, ಕೆಲವರು ಹೊರಗಿನಿಂದ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸಚಿವರು ಮಾತ್ರವಲ್ಲ, ಮಾಜಿ ಮುಖ್ಯಮಂತ್ರಿಗಳು ಕೂಡ ಕೆಲ ಕ್ಷೇತ್ರಗಳಲ್ಲಿ ನಮಗೆ ಸಹಾಯ ಮಾಡಿದ್ದಾರೆ. ಅವರ ಸಹಾಯ ಪಕ್ಷಕ್ಕೆ ಅಂತ ಭಾವಿಸಬಾರದು, ಅವರೆಲ್ಲ ದೇಶ ಕಟ್ಟೋಕೆ ಸಹಾಯ ಮಾಡಿದ್ದಾರೆ. ನಮಗೆ ಸಣ್ಣ ರಾಜಕೀಯ ಗೊತ್ತಿಲ್ಲ. ದೇಶ ಗೆಲ್ಲಿಸುವ ಚುನಾವಣೆ ಇದಾಗಿದ್ದು, ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಅವರೆಲ್ಲ ಸಹಾಯ ಮಾಡಿದ್ದಾರೆ ಎಂದು ಸಿ ಟಿ ರವಿ ಹೇಳಿದರು.