ಬೆಂಗಳೂರು : ಬಾಬಾ ಬುಡನ್‍ಗಿರಿ ಗುರು ದತ್ತಾತ್ರೇಯ ಪೀಠದ ಪೂಜೆಗೆ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿ ಹೈಕೋರ್ಟ್ ಆದೇಶ ನೀಡಿದೆ. ಇದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ವಾಗತಿಸಿದ್ದಾರೆ.
ಹಿಂದೂಗಳ ಪವಿತ್ರ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ‘ಬಾಬಾ ಬುಡನ್‍ಗಿರಿ' ಗುರು ದತ್ತಾತ್ರೇಯ ಪೀಠದ ಪೂಜೆಗೆ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018ರ ಮಾರ್ಚ್ 19ರಂದು ಆದೇಶ ಹೊರಡಿಸಿದ್ದರು.
ಮೌಲ್ವಿ ನೇಮಕ ಆದೇಶ ರದ್ದು ಮಾಡಿ ಇಂದು ಹೈಕೋರ್ಟ್ ಆದೇಶ ನೀಡಿದ್ದಾರೆ. ಈ ಮಹತ್ವದ ತೀರ್ಪನ್ನು ಅತ್ಯಂತ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಮೌಲ್ವಿ ನೇಮಿಸುವ ಕುರಿತ ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ರದ್ದು ಮಾಡಿರುವ ಹೈಕೋರ್ಟ್ ತೀರ್ಪಿನಿಂದ ಹಿಂದೂಗಳೆಲ್ಲರಿಗೂ ಅತ್ಯಂತ ಸಂತೋಷ ಉಂಟಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ದತ್ತ ಪೀಠದ ವಿಚಾರದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ದತ್ತ ಮಾಲಾಧಾರಿಗಳು ಮತ್ತು ದತ್ತ ಪೀಠವನ್ನು ನಂಬುವ ಎಲ್ಲರಿಗೂ ಶುಭ ವಿಚಾರ ಬಂದಿದೆ. ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ಯಾವತ್ತೂ ಸತ್ಯಕ್ಕೆ ಜಯ ಖಚಿತ ಎಂಬುದು ಇದರಿಂದ ದೃಢಪಟ್ಟಿದೆ. ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಅವರ ನ್ಯಾಯಪೀಠದಿಂದ ಈ ಆದೇಶ ಬಂದಿದೆ. ಸಮಸ್ತ ಹಿಂದೂಗಳ ಧಾರ್ಮಿಕ ಭಾವನೆಗಳ ಗೌರವವನ್ನು ಎತ್ತಿ ಹಿಡಿದಂತಾಗಿದೆ.
ಸಚಿವ ಸಂಪುಟ ಉಪ ಸಮಿತಿ ನೇಮಕ ಮಾಡಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್, ಹಂಪಿ ಕನ್ನಡ ವಿವಿಯ ರಹಮತ್ ತರೀಕೆರೆ, ಇತಿಹಾಸ ತಜ್ಞ ಷ.ಶೆಟ್ಟರ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯೇ ಕಾನೂನುಬಾಹಿರವಾಗಿತ್ತು. ನಾಗಮೋಹನ್ ದಾಸ್ ಸಮಿತಿ ವರದಿಯನ್ನು ವಜಾಗೊಳಿಸಿ ವಿಶ್ವಹಿಂದೂ ಪರಿಷತ್ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಚಿಕ್ಕಮಗಳೂರು ದತ್ತಪೀಠಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು ಸಂಘ ಪರಿವಾರಕ್ಕೆ ಸಂದ ಜಯ. ಇದು ಹಿಂದೂಗಳಿಗೆ ಸಿಕ್ಕ ದೊಡ್ಡ ಜಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್, ಆರ್ಎಸ್ಎಸ್, ಬಿಜೆಪಿ ಸೇರಿದಂತೆ ಬಹಳಷ್ಟು ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿದ್ದವು. 2018-19ರಲ್ಲಿ ಮೌಲ್ವಿಗಳನ್ನ ಪೂಜೆ ಮಾಡಲು ನೇಮಿಸಲಾಗಿತ್ತು.
ವಿಶ್ವ ಹಿಂದೂ ಪರಿಷತ್ ದೂರು ನೀಡಿ ಕೋರ್ಟ್ ಮೊರೆ ಹೋಗಿತ್ತು. ದತ್ತಪೀಠ ಹಿಂದೂಗಳಿಗೆ ಸೇರಿದ್ದು ಅಂತಾ ಕೋರ್ಟ್ ಇಂದು ತೀರ್ಪು ನೀಡಿದೆ. ಇದು ಸಂಘಪರಿವಾರಕ್ಕೆ ಸಂದ ಜಯ ಎಂದು ತಿಳಿಸಿದರು.
ನೂರಾರು ಕೇಸ್ ದಾಖಲಿಸಿಕೊಂಡು ಕಾಂಗ್ರೆಸ್ ಸರ್ಕಾರ ಎಲ್ಲರನ್ನೂ ಬಂಧನ ಮಾಡಿತ್ತು. ಹೋರಾಟ ಹತ್ತಿಕ್ಕಿ, ಸೆದೆ ಬಡಿಯೋ ತೀರ್ಮಾನ ಮಾಡಿತ್ತು. ಬಾಬಾ ಬುಡನ್‌ಗಿರಿ ಅಂತಾ ಹೇಳಿ ಹಿಂದೂಗಳ ಭಾವನೆಗೆ ವಿರುದ್ಧವಾಗಿ ನಡೆದುಕೊಂಡಿತ್ತು.
ಆದರೆ, ಸುಪ್ರೀಂಕೋರ್ಟ್ ಹಿಂದೂಗಳ ಪರವಾಗಿ ತೀರ್ಪು ನೀಡಿದೆ. ಇದು ಹಿಂದೂಗಳ ಶ್ರದ್ಧಾ, ಭಕ್ತಿಯನ್ನ ಎತ್ತಿ ಹಿಡಿದಿದೆ. ಹಿಂದೂಗಳಿಗೆ ಸಿಕ್ಕ ದೊಡ್ಡ ಜಯ ಇದಾಗಿದೆ. ಹಾಗಾಗಿ, ನಾವು ಕೋರ್ಟಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ದಶಕಗಳ ಹೋರಾಟದ ಫಲ
ಹಿಂದೂಗಳ ಶ್ರದ್ಧಾ ಕೇಂದ್ರವಾದ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡುವಂತೆ ಹೈಕೋರ್ಟ್ ಆದೇಶಿಸಿರುವುದು ದಶಕಗಳ ಹೋರಾಟದ ಫಲ ಎಂದು ಸಚಿವ ಸುನಿಲ್ ಕುಮಾರ್ ಬಣ್ಣಿಸಿದ್ದಾರೆ.
ಹೈಕೋರ್ಟ್ ಅರ್ಚಕರ ನೇಮಕಕ್ಕೆ ಸಂಬಂಧಿಸಿದಂತೆ ಮುಜಾರಾಯಿ ಇಲಾಖೆ ಸಮಿತಿ ರಚಿಸಬೇಕು. ಸಮಿತಿ ಸಮಾಲೋಚನೆ ನಡೆಸಿದ ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಎಂದು ಆದೇಶಿಸಿದೆ. ಹೈಕೋರ್ಟ್ ನ ತೀರ್ಪು ಸ್ವಾಗತಾರ್ಹ. ದಶಕಗಳ ಕಾಲ ಹೋರಾಟ ನಡೆಸಿದ್ದರ ಫಲ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಕೂಡ ಹಿಂದೂ ಅರ್ಚಕರನ್ನು ನೇಮಕ ಮಾಡುವಂತೆ ಸೂಚಿಸಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಕೋರ್ಟ್ ತೀರ್ಪು ಬದಿಗಿರಿಸಿ, ಪೂಜಾ ಕಾರ್ಯಕ್ಕೆ ಮುಜಾವರ್ ನೇಮಕ ಮಾಡಿತ್ತು. ಇದೀಗ ಹೈಕೋರ್ಟ್ ಹಿಂದೂ ಅರ್ಚಕರನ್ನು ನೇಮಕ ಮಾಡುವಂತೆ ಆದೇಶಿಸಿದೆ.
ಹೀಗಾಗಿ, ಮುಜರಾಯಿ ಇಲಾಖೆ ಕೂಡಲೇ ಸಮಿತಿ ರಚಿಸಿ, ಹಿಂದೂ ಅರ್ಚಕರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಶೀಘ್ರದಲ್ಲೇ ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜಾ ವಿಧಾನಗಳು ನೆರವೇರಬೇಕು ಎಂದಿದ್ದಾರೆ.
ಹೋರಾಟಕ್ಕೆ ಜಯ :
ದತ್ತ ಪೀಠದ ವಿಚಾರದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ದತ್ತ ಮಾಲಾಧಾರಿಗಳು ಮತ್ತು ದತ್ತ ಪೀಠವನ್ನು ನಂಬುವ ಎಲ್ಲರಿಗೂ ಶುಭ ವಿಚಾರ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸಂತಸ ಹೊರಹಾಕಿದ್ದಾರೆ.
ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ಯಾವತ್ತೂ ಸತ್ಯಕ್ಕೆ ಜಯ ಖಚಿತ ಎಂಬುದು ಇದರಿಂದ ಋಜುವಾತಾಗಿದೆ. ಹಿಂದುಗಳ ಪವಿತ್ರ ಸ್ಥಾನ ಚಿಕ್ಕಮಗಳೂರು ಜಿಲ್ಲೆಯ ‘ಬಾಬಾ ಬುಡನ್‍ಗಿರಿ" ಗುರು ದತ್ತಾತ್ರೇಯ ಪೀಠದ ಪೂಜೆಗೆ ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018ರ ಮಾರ್ಚ್ 19ರಂದು ಆದೇಶ ಹೊರಡಿಸಿದ್ದರು. ಮೌಲ್ವಿ ನೇಮಕ ಆದೇಶ ರದ್ದು ಮಾಡಿ ಇಂದು ಹೈಕೋರ್ಟ್ ಆದೇಶ ನೀಡಿದ್ದು, ಈ ಮಹತ್ವದ ತೀರ್ಪನ್ನು ಅತ್ಯಂತ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಮೌಲ್ವಿ ನೇಮಿಸುವ ಕುರಿತ ಧಾರ್ಮಿಕ ದತ್ತಿ ಇಲಾಖೆಯ ಆದೇಶವನ್ನು ರದ್ದು ಮಾಡಿರುವ ಹೈಕೋರ್ಟ್ ತೀರ್ಪಿನಿಂದ ಹಿಂದೂಗಳೆಲ್ಲರಿಗೂ ಸಂತೋಷ ಉಂಟಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಓದಿ: ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಜಾವರ್ ನೇಮಿಸಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್