ಬೆಂಗಳೂರು: ರಾಜಕೀಯ ಪ್ರಚೋದಿತ ಕಿಡಿಗೇಡಿಗಳು ಸಚಿವ ನಾಗೇಶ್ ಮನೆಗೆ ನುಗ್ಗಿ ಗಲಭೆ ಮಾಡಿ, ಬೆಂಕಿ ಹಾಕುವ ಪ್ರಯತ್ನ ಮಾಡಿದ್ದಾರೆ. ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಇದು ತಾಲಿಬಾನ್ ಸಂಸ್ಕೃತಿ, ಸಚಿವರ ಮನೆಗೆ ಬೆಂಕಿ ಹಾಕುವುದಕ್ಕೆ ಬಂದಿರುವವರನ್ನ ಸಮರ್ಥನೆ ಮಾಡಿಕೊಂಡವರು ದೇಶ ವಿರೋಧಿಗಳು, ಪ್ರಜಾಪ್ರಭುತ್ವ ವಿರೋಧಿಗಳು. ಇದನ್ನು ಬಿಜೆಪಿ ಖಂಡಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕುವ ಪ್ರಯತ್ನ ಮಾಡಿದ್ದಂತೆ, ಈಗ ಸಚಿವ ನಾಗೇಶ್ ಮನೆಗೆ ಬೆಂಕಿ ಹಾಕುವ ಪ್ರಯತ್ನ ಮಾಡಿದ್ದಾರೆ. ನಾಗೇಶ್ ಇದರಿಂದ ಅಧೀರರಾಗಬಾರದು. ಇದೆಲ್ಲಾ ಕೆಲ ಕಾಲ ಮಾತ್ರ ವಿಜೃಂಭಿಸುತ್ತದೆ. ಇಂತವರನ್ನು ಬುಡ ಸಮೇತ ಕಿತ್ತು ಹಾಕಬೇಕು. ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಅವರ ಮನೋಭಾವ ಬೆಂಕಿ ಹಾಕುವುದೇ ಆಗಿತ್ತು. ಅವರು ಚರ್ಚೆಗೆ ಬರಲಿ, ಅದನ್ನು ಬಿಟ್ಟು ಬೆಂಕಿ ಹಾಕುವ ಪ್ರಯತ್ನ ತಾಲಿಬಾನ್ ಸಂಸ್ಕೃತಿ ಎಂದರು.
ಕಿಸಾನ್ ಯೂನಿಯನ್ ನಾಯಕ ಟಿಕಾಯತ್ ಮೇಲೆ ಮಸಿ ಬಳಿದವರು ಯಾವುದೇ ಸಿದ್ಧಾಂತದವರಾಗಿದ್ದರೂ ಅದನ್ನು ನಾವು ವಿರೋಧ ಮಾಡುತ್ತೇವೆ. ಪಠ್ಯದಲ್ಲಿ ಅವರಿಗೆ ಗೊಂದಲ ಇದ್ದರೆ ಚರ್ಚೆ ಮಾಡಲಿ. ಆದರೆ ಅವರ ಮನಸ್ಸಿನಲ್ಲಿಯೇ ಗೊಂದಲ ಇದ್ದರೆ ಏನ್ ಮಾಡೋದು. ಇವರು ಸೇರಿಸಿದ್ದ ವಿಷ ಬೀಜ ಬಿತ್ತುವ ಪಠ್ಯ ಮುಂದುವರಿಸಬೇಕಾ? ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಅನುಭವ ಮಂಟಪ ಮಾಡುವುದಕ್ಕೆ 600 ಕೋಟಿ ರೂಪಾಯಿ ಕೊಟ್ಟಿದೆ. ಪಠ್ಯದಲ್ಲಿ ದೋಷ ಇದ್ದರೆ ಚರ್ಚೆ ಮಾಡೋಣ. ನಮಗೆ ಸ್ವಾಮೀಜಿಗಳ ಬಗ್ಗೆ ಗೌರವ ಇದೆ. ಆದರೆ ಕಿಡಿಗೇಡಿಗಳನ್ನು ಮತ್ತು ಸ್ವಾಮೀಜಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲ್ಲ. ನಮ್ಮ ಸರ್ಕಾರ ಬಂದಿದ್ದನ್ನೇ ಸಹಿಸಿಕೊಳ್ಳದ ಒಂದು ಗುಂಪು ಇದೆ. ಅಂತವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. ಅವರ ಸರ್ಕಾರ ಬಂದಾಗ ರೋಹಿತ್ ಚಕ್ರತೀರ್ಥರನ್ನು ಕೆಳಗಿಳಿಸಲಿ. ಅವರ ಸರ್ಕಾರವೇ ಚಕ್ರತಿರ್ಥಗೆ ಬಿ ರಿಪೋರ್ಟ್ ಕೊಟ್ಟಿದೆ. ಈಗ ಆರೋಪ ಮಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದರು.
ಈ ನೆಲದ ಕಾನೂನಿಗೆ ಬೆಲೆ ಇಲ್ಲವಾ?. ನಮ್ಮ ಕಾರ್ಯದಲ್ಲಿ ದೋಷ ಇದ್ದರೆ ಸರಿ ಮಾಡಿಕೊಳ್ಳುತ್ತೇವೆ. ಸಾಹಿತಿಗಳ ಪಠ್ಯದಿಂದ ಹಿಂದೆ ಸರಿದಿರುವ ಹಿಂದೆ ಟೂಲ್ ಕಿಟ್ ಪ್ಲಾನ್ ಇದೆ. ಸಾಹಿತಿಗಳು ಆ ಟೂಲ್ ಕಿಟ್ ಭಾಗವಾಗಿರಬಹುದು ಎನ್ನುವ ಅನುಮಾನ ನನಗೆ ಇದೆ. ಹಿಂದೆ ಸಿಎಎ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಟೂಲ್ ಕಿಟ್ ಇತ್ತು. ಇಲ್ಲೂ ಅದೇ ರೀತಿಯ ಟೂಲ್ ಕಿಟ್ ರಾಜಕೀಯ ಇರಬಹುದು ಎಂದು ತಿಳಿಸಿದರು.
ಬಿ. ಸಿ ನಾಗೇಶ್ ನಿವಾಸದ ಮೇಲೆ ದಾಳಿ ನಡೆಸಿರುವುದು ಹೇಡಿತನ.. 'ಪಠ್ಯಪುಸ್ತಕ ಮರುಪರಿಷ್ಕರಣೆಯನ್ನು ಬೌದ್ಧಿಕವಾಗಿ ಎದುರಿಸಲಾಗದ ಕಾಂಗ್ರೆಸ್ ಪಕ್ಷದ ಭಟ್ಟಂಗಿಗಳು ಸಚಿವ ಬಿ. ಸಿ ನಾಗೇಶ್ ಅವರ ತಿಪಟೂರಿನ ನಿವಾಸದ ಮೇಲೆ ದಾಳಿ ನಡೆಸಿರುವುದು ಹೇಡಿತನ ಮತ್ತು ಅವಿವೇಕದ ಪರಮಾವಧಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್ ಅಶ್ವತ್ಥನಾರಾಯಣ ಖಂಡಿಸಿದ್ದಾರೆ.
'ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ ಕಾರ್ಯಕರ್ತರು ತಮ್ಮನ್ನು ತಾವು ಕುವೆಂಪು ಆರಾಧಕರು ಎಂದು ಹೇಳಿದ್ದಾರೆ. ಆದರೆ, ಸಚಿವರ ಮನೆ ಮೇಲೆ ದಾಳಿ ಮಾಡುವ ಮೂಲಕ ಮಹಾಕವಿಯ ತತ್ವಗಳಿಗೆ ಮಸಿ ಬಳಿದಿದ್ದಾರೆ. ಇಂತಹ ಗೂಂಡಾಗಿರಿಯನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ನಿಶ್ಚಿತ’ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
'ಕಾಂಗ್ರೆಸ್ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನೇ ನಾಶ ಮಾಡಿ, ಗುಲಾಮಗಿರಿಯನ್ನು ಬೆಳೆಸಿದೆ. ಸ್ವತಂತ್ರ ಆಲೋಚನೆ ಇರುವವರಾರೂ ದಾಳಿಯಂಥ ಅನಾಗರಿಕ ಕೃತ್ಯಗಳಿಗೆ ಮುಂದಾಗುವುದಿಲ್ಲ. ಇದು ಕಾಂಗ್ರೆಸ್ಸಿನ ಸಾಂಸ್ಕೃತಿಕ, ಬೌದ್ಧಿಕ ಮತ್ತು ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಆದರೆ, ಇಂತಹ ಕೀಳು ತಂತ್ರಗಳಿಂದ ಬಿಜೆಪಿ ಸರ್ಕಾರದ ಸ್ಥೈರ್ಯವನ್ನು ಕುಗ್ಗಿಸಲು ಎಂದಿಗೂ ಸಾಧ್ಯವಿಲ್ಲ. ಏಕೆಂದರೆ, ಕಾಂಗ್ರೆಸ್ ಪಕ್ಷವನ್ನು ದೇಶದ ಜನ ಈಗಾಗಲೇ ಕಸದ ಬುಟ್ಟಿಗೆ ಎಸೆದಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
'ನಾಗೇಶ್ ಅವರ ಮನೆಯ ಮೇಲೆ ಮಾಡಿರುವ ದಾಳಿಯು ಅಸಹಿಷ್ಣುತೆಯ ಸಂಕೇತವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವೈಚಾರಿಕ ಸ್ವಾತಂತ್ರ್ಯಗಳ ಬಗ್ಗೆ ಬಿಜೆಪಿ ಬಗ್ಗೆ ಅನಗತ್ಯವಾಗಿ ಗೂಬೆ ಕೂರಿಸುತ್ತಿರುವ ಸಾಹಿತಿಗಳು ಈಗ ಜಾಣಮೌನಕ್ಕೆ ಜಾರಿರುವುದು ಅಪಾಯಕಾರಿ ಬೆಳವಣಿಗೆ. ಕಾಂಗ್ರೆಸ್ ತಾನು ಅಧಿಕಾರದಲ್ಲಿಲ್ಲದಿದ್ದಾಗ ಹೆಚ್ಚು ಅಪಾಯಕಾರಿ ಎನ್ನುವ ವಾಜಪೇಯಿಯವರ ಮಾತು ನಿಜವೆಂದು ಇದರಿಂದ ಸಾಬೀತಾಗಿದೆ’ ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಓದಿ: ಸಚಿವ ನಾಗೇಶ್ ಮನೆ ಮೇಲೆ ದಾಳಿ: ಸಿ. ಸಿ. ಪಾಟೀಲ್, ಸುಧಾಕರ್ ಖಂಡನೆ
ಕಟೀಲ್ ಖಂಡನೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆ ಮೇಲೆ ಕಾಂಗ್ರೆಸ್ ಮತ್ತು ಎನ್‍ಎಸ್‍ಯುಐ ಕಾರ್ಯಕರ್ತರು ದಾಳಿ ಮಾಡಲು ಮುಂದಾದ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರವಾಗಿ ಖಂಡಿಸಿದ್ದಾರೆ. ಎನ್‍ಎಸ್‍ಯುಐ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯಾಗಿದೆ. ಕಾಂಗ್ರೆಸ್ ಹಾಗೂ ಎನ್‍ಎಸ್‍ಯುಐ ಕಾರ್ಯಕರ್ತರು ಇಂದು ಮನೆ ಮೇಲೆ ದಾಳಿ ಮಾಡಿದಲ್ಲದೇ ಬೆಂಕಿ ಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದರು. ಇದನ್ನು ಪೊಲೀಸರು ತಕ್ಷಣ ತಡೆದಿದ್ದಾರೆ ಎಂದು ಕಟೀಲ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಸಚಿವರ ಮನೆಗೆ ಬೆಂಕಿ ಹಾಕುವ ಯತ್ನದ ಮೂಲಕ ಕಾಂಗ್ರೆಸ್‍ನವರ ಹತಾಶ ಮನೋಭಾವನೆ ಅನಾವರಣಗೊಂಡಿದೆ. ಸೈದ್ಧಾಂತಿಕವಾಗಿ ಜನರ ನಡುವೆ ನಿಂತು ತಮ್ಮ ವಿಚಾರ ಹೇಳುವಲ್ಲಿ ಕಾಂಗ್ರೆಸ್‍ನವರು ವಿಫಲರಾಗಿದ್ದಾರೆ. ಕಾಂಗ್ರೆಸ್ ಮುಖಂಡರು ಹಿಂದಿನಿಂದಲೂ ಗಲಾಟೆ ಮಾಡುವ ಪ್ರವೃತ್ತಿಯನ್ನೇ ತನ್ನದಾಗಿಸಿಕೊಂಡಿದ್ದಾರೆ. ಕೋಮುಗಲಭೆ, ಹಿಂಸೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಹಾಕುವುದು ಸಹಜ ಗುಣವಾಗಿದೆ. ಡಿ.ಜೆ ಹಳ್ಳಿ, ಕೆ.ಜೆ. ಹಳ್ಳಿ ಗಲಭೆಯಲ್ಲಿ ತಮ್ಮ ಪಕ್ಷದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಚ್ಚುವ ವಿಚಾರದಲ್ಲೂ ಕಾಂಗ್ರೆಸ್ ಮುಖಂಡರೇ ಕುಮ್ಮಕ್ಕು ನೀಡಿದ್ದರು. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ದೇಶದಾದ್ಯಂತ ತಿರಸ್ಕರಿಸಿದ್ದಾರೆ. ಮುಂದಿನ ದಿನದಲ್ಲಿ ಕರ್ನಾಟಕದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ದುಷ್ಕೃತ್ಯದಲ್ಲಿ ಭಾಗವಹಿಸಿದ ಎಲ್ಲರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವರನ್ನು ವಿನಂತಿಸಿರುವುದಾಗಿ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.