ಬೆಂಗಳೂರು: ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ನ್ಯಾಯಾಲಯದ ತೀರ್ಪನ್ನು ಒಪ್ಪಲೇಬೇಕಾಗುತ್ತದೆ. ಗಣೇಶನ ಪೂಜೆ, ಹಿಂದೂಗಳು ಗಾಳಿಯನ್ನು, ಸೂರ್ಯನನ್ನು ಪೂಜೆ ಮಾಡುತ್ತಾರೆ. ಹಾಗಾದರೆ ಗಾಳಿಯನ್ನು, ಸೂರ್ಯನನ್ನು ದ್ವೇಷ ಮಾಡಿ ಬದುಕಲು ಆಗುತ್ತಾ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ನ್ಯಾಯಾಲಯಕ್ಕೆ ಹೋಗಲು ಅವಕಾಶ ಇದೆ. ಸುಪ್ರೀಂ ಕೋರ್ಟ್ ಏನು ಹೇಳುತ್ತೆ ನೋಡೋಣ? ಗಣೇಶೋತ್ಸವ ಪ್ರಕೃತಿ ಪೂಜೆಗೆ ಸಮವಾಗಿದೆ. ನಮ್ಮ ಸಂಭ್ರಮವನ್ನು ಅವರು ಕಿತ್ತುಕೊಳ್ಳಬಾರದು, ಅವರ ಆನಂದವನ್ನು ನಾವು ಕಿತ್ತುಕೊಳ್ಳಬಾರದು. ಸಂಭ್ರಮಿಸುವ ಅವಕಾಶವನ್ನು ಸರ್ಕಾರ ಕೊಡುತ್ತದೆ ಎಂದರು.
ಮನೋವಿಜ್ಞಾನ ಸ್ವರೂಪದಲ್ಲಿ ಅರ್ಥೈಸಿಕೊಳ್ಳಬೇಕು: ಇದೇ ವೇಳೆ ಸಾವರ್ಕರ್ ಪಠ್ಯ ವಿವಾದದ ಕುರಿತು ಮಾತನಾಡುತ್ತ, ಇದನ್ನು ಮನೋವಿಜ್ಞಾನ ಸ್ವರೂಪದಲ್ಲಿ ಅರ್ಥೈಸಿಕೊಳ್ಳಬೇಕು. ಅದರಲ್ಲಿ ನೋಡದೇ ಇರುವ ಜಗತ್ತನ್ನು ವಿಹರಿಸಬಲ್ಲೆ ಎಂಬ ಭಾವನೆಯನ್ನು ಬುಲ್ ಬುಲ್ ಪಕ್ಷಿಯ ಮೂಲಕ ವಿವರಿಸಿದ್ದಾರೆ. ಸಾವರ್ಕರ್ಗೆ ನೆಹರೂ ತರ ಜೈಲಲ್ಲಿ ಡಿಸ್ಕವರಿ ಆಫ್ ಇಂಡಿಯಾ ಬರೆಯುವ ಸೌಲಭ್ಯ ಇರಲಿಲ್ಲ. ಮೌಂಟ್ ಬ್ಯಾಟನ್ ಪತ್ನಿ ಜೊತೆ ಹೆಗಲಿಗೆ ಕೈಹಾಕಿ ಬದುಕುವ ಅವಕಾಶವೂ ಇರಲಿಲ್ಲ ಎಂದು ವ್ಯಂಗ್ಯವಾಡಿದರು.
ಓದಿ: ಮಹಾನಗರ ಪಾಲಿಕೆ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕೆಲಸ ಮಾಡುತ್ತೇವೆ: ಎಡಿಜಿಪಿ ಅಲೋಕ್ ಕುಮಾರ್