ಬೆಂಗಳೂರು : ಶಿರಾ, ಆರ್.ಆರ್. ನಗರ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರನ್ನು ಸಿಎಂ ಭೇಟಿ ಮಾಡಿ ಶುಭ ಕೋರಿದರು.
ಬಳಿಕ ಮಾತನಾಡಿದ ಅವರು, ಮೊದಲಿಗೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಮತ ನೀಡಿದವರಿಗೂ, ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಸರ್ಕಾರಕ್ಕೆ ರಾಜ್ಯದ ಜನರು ಬೆಂಬಲ ಸೂಚಿಸಿದ್ದಾರೆ. ಪ್ರವಾಹ, ಕೋವಿಡ್ನಂತಹ ಸಂದರ್ಭದಲ್ಲಿಯೂ ಜನತೆ ನಮ್ಮೊಂದಿಗೆ ಇದ್ದಾರೆ. ಜನರಿಗೆ ಕೊಟ್ಟ ಭರವಸೆಗಳನ್ನು ನಾನು ಈಡೇರಿಸಿದ್ದೇನೆ. ಆರ್.ಆರ್. ನಗರ, ಶಿರಾ ಜನತೆಗೆ ಕೊಟ್ಟಿರುವ ಭರವಸೆಗಳನ್ನೂ ಈಡೇರಿಸುತ್ತೇನೆ ಎಂದು ಹೇಳಿದರು.
ದೇಶದ ಎಲ್ಲಾ ಕಡೆ ಬಿಜೆಪಿಗೆ ಅದ್ಭುತ ಗೆಲುವು ಸಿಕ್ಕಿದೆ. ರಾಜ್ಯದ ಜನತೆಗೆ ಕೊಟ್ಟಿರುವ ಮಾತನ್ನು ಎರಡೂವರೆ ವರ್ಷಗಳಲ್ಲಿ ಈಡೇರಿಸುತ್ತೇನೆ. ಇನ್ನೆರಡು ದಿನಗಳಲ್ಲಿ ಪ್ರಧಾನಿಯವರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಕೇಳುತ್ತೇನೆ ಎಂದರು.
ಮುಂದಿನ ಮೂರು ಉಪಚುನಾವಣೆಗಳಲ್ಲಿಯೂ ಬಿಜೆಪಿ ನೂರಕ್ಕೆ ನೂರರಷ್ಟು ಗೆಲ್ಲಬೇಕು. ಆ ನಿಟ್ಟಿನಲ್ಲಿ ಹೈಕಮಾಂಡ್ ಜತೆ ಚರ್ಚಿಸಿ ಅಭ್ಯರ್ಥಿಗಳು ಯಾರೆಂದು ನಿರ್ಧರಿಸಲಾಗುವುದು ಎಂದರು.
ಇನ್ನೂ, ವಿಜಯೇಂದ್ರ ಯಾವುದೇ ಬೈ ಎಲೆಕ್ಷನ್ನಲ್ಲಿ ಸ್ಪರ್ಧೆ ಮಾಡಲ್ಲ. ಹೈಕಮಾಂಡ್ ನಾಯಕರು ಒಪ್ಪಿದರೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದರು.