ಬೆಂಗಳೂರು: ಸೋತವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಾಧ್ಯವಿಲ್ಲ ಎನ್ನುವ ಮೂಲಕ ಉಪ ಚುನಾವಣೆಯಲ್ಲಿ ಪರಾಜಿತರಾಗಿರುವ ಎಂಟಿಬಿ ನಾಗರಾಜ್ ಮತ್ತು ಹೆಚ್.ವಿಶ್ವನಾಥ್ ಹೆಸರು ಸಚಿವರ ಪಟ್ಟಿಯಲ್ಲಿ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ದೆಹಲಿಯಿಂದ ವಾಪಸ್ಸಾದ ನಂತರ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಾತ್ಮಕವಾಗಿ ಸೋತವರಿಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರಕಾರ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಆದರೂ ನಮ್ಮನ್ನು ಬೆಂಬಲಿಸಿ ಬಂದವರ ಹಿತ ಕಾಯುವುದು ಮುಖ್ಯ, ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಮುನ್ನಡೆಯುತ್ತೇನೆ ಎಂದರು.
ಸಂಪುಟ ವಿಸ್ತರಣೆ ದಿನಾಂಕ ನಿಗದಿ ಹಾಗೂ ಸಂಪುಟದಲ್ಲಿ ಯಾರಿಗೆ ಸ್ಥಾನ ಎನ್ನುವ ಮಾಹಿತಿ ನಾಳೆ ಸಂಜೆ ವೇಳೆಗೆ ಗೊತ್ತಾಗಲಿದೆ, ಹಾಲಿ ಇರುವ ಯಾರಿಗೂ ಯಾವ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.