ಬೆಂಗಳೂರು : ಮಳೆಯಿಂದ ಅನಾಹುತ ಆಗುತ್ತಿರುವ ಜಿಲ್ಲೆಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರು ನಗರ ಪರಿಶೀಲನೆ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಮಾತನಾಡಿದರು.
ಕಳೆದ ನಾಲ್ಕೈದು ದಿನದಿಂದ ನಿರಂತರವಾಗಿ ಡಿಸಿಗಳ ಜೊತೆ ಮಾತನಾಡಿದ್ದೇನೆ. ಡ್ಯಾಂಗೆ ಬರುತ್ತಿರುವ ನೀರು ಹೊರಗೆ ಬಿಡುತ್ತಿದ್ದೇವೆ. ಯಾವುದೇ ತೊಂದರೆಯಾಗಿಲ್ಲ ಎಂದರು. ಬೆಳಗಾವಿ, ದಕ್ಷಿಣ ಕನ್ನಡ, ಹುಬ್ಬಳ್ಳಿ- ಧಾರವಾಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಹಾಸನ, ರಾಯಚೂರು ಸೇರಿದಂತೆ ನಗರದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಬೆಂಗಳೂರು ನಗರ ಪ್ರದಕ್ಷಿಣೆ ನಡುವೆಯೂ ಸಿಎಂ ಫೋನ್ ಮೂಲಕ ಮಳೆ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲೇ ಇದ್ದುಕೊಂಡು ಪರಿಸ್ಥಿತಿ ಗಮನಿಸಲು ಸೂಚಿಸಿದರು.
ಗೋವಿಂದ ಕಾರಜೋಳ ಅವರಿಗೆ ಜುಲೈ 25ರವರೆಗೆ ಜಿಲ್ಲೆಯಲ್ಲೇ ಇರುವಂತೆ ಸೂಚಿಸಿದ್ದೇನೆ. ಹೆಲಿಕಾಪ್ಟರ್ ಮೂಲಕ ವೀಕ್ಷಣೆಗೆ ಮಳೆ ಅಡ್ಡಿಯಾಗುತ್ತದೆ. ಸದ್ಯಕ್ಕೆ ಗಾಬರಿಯಾಗುವ, ಅನಾಹುತದ ಪರಿಸ್ಥಿತಿ ಏನೂ ಬಂದಿಲ್ಲ. ಮಳೆ ಪರಿಸ್ಥಿತಿ ಎದುರಿಸುವ ಎಲ್ಲಾ ಸವಲತ್ತು ಸಿದ್ಧತೆ ಇದೆ. ಸಾವು- ನೋವು ಆಗದಂತೆ ಕಟ್ಟೆಚ್ಚರವಹಿಸಲಾಗಿದೆ ಎಂದರು.
ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ತೆರಳದೆ ಇರುವ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದ ಸಿಎಂ, ಯಾರು ಹೇಳಿದ್ದು, ಎಲ್ಲರೂ ಇದ್ದಾರೆ ಎಂದರು.
ಇದನ್ನೂ ಓದಿ: ಸಿಎಂ ಅವರೇ ಸ್ಪಷ್ಟಪಡಿಸಿದ್ದಾರೆ, ನಾನು ಹೇಳುವುದೇನಿದೆ: ಸಚಿವ ಸುರೇಶ್ ಕುಮಾರ್ ಪ್ರಶ್ನೆ