ಬೆಂಗಳೂರು: ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ರಾಜ್ಯಾಧ್ಯಕ್ಷ ಹುದ್ದೆ ನೀಡಲಾಗಿದೆ ಎಂದು ಕಾಂಗ್ರೆಸ್ ಮಾಡಿರುವ ಟೀಕೆಗೆ ಮುಂದಿನ ದಿನಗಳಲ್ಲಿ ನಾನು ಉತ್ತರ ಕೊಡುತ್ತೇನೆ. ನಾನು ಯಡಿಯೂರಪ್ಪ ಪುತ್ರ ಎಂಬುದಕ್ಕೆ ನನಗೆ ಹೆಮ್ಮೆ ಇದೆ, ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕೆ ಕೊಟ್ಟಿದ್ದಾರೆ ಎಂದಾದರೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲೇ ನಾನು ಸಚಿವನಾಗುತ್ತಿದ್ದೆ ಎಂದು ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದಲ್ಲಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಿನ್ನ ನೇತೃತ್ವಲ್ಲಿ ಪಕ್ಷ ದೊಡ್ಡದಾಗಿ ಬೆಳೆಯಲಿ ಎಂದು ಹಲವು ನಾಯಕರು ಹಾರೈಸಿದ್ದಾರೆ. ಪಕ್ಷದಲ್ಲೂ ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಕೆಲಸ ಮಾಡುತ್ತೇನೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಹೆಸರುಗಳ ಬಗ್ಗೆ ಚರ್ಚೆ ಆಯ್ತು. ಆದರೆ, ಪಕ್ಷದ ಭವಿಷ್ಯದ ದೃಷ್ಟಿಯಿಂದ ನನಗೆ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ನನಗೆ ಹೆಮ್ಮೆ ಇದೆ, ತುಂಬಾ ಸಂತೋಷ ಕೂಡ ಇದೆ ಎಂದರು.
ವಿಜಯೇಂದ್ರ ನೇಮಕದಿಂದ ಕುಟುಂಬ ರಾಜಕಾರಣ ಅನ್ನೋದು ಇಲ್ಲ ಎಂಬುದು ಸುಳ್ಳು ಆಗೋಯ್ತಾ ಎಂಬ ಕಾಂಗ್ರೆಸ್ ಟೀಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇದೆಲ್ಲದಕ್ಕೂ ಮುಂದೆ ತಕ್ಕ ಉತ್ತರ ಕೊಡ್ತೀನಿ. ಯಡಿಯೂರಪ್ಪ ಮಗ ಅಂತಾ ನನಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಆ ರೀತಿ ಇದ್ದಿದ್ದರೆ ಹಿಂದೆಯೇ ಬೊಮ್ಮಾಯಿ ಸಿಎಂ ಆಗಿದ್ದಾಗ ನನಗೆ ಮಂತ್ರಿ ಆಗುವ ಅವಕಾಶ ಸಿಗುತ್ತಿತ್ತು. ನಾನು ಯಡಿಯೂರಪ್ಪರ ಮಗ ಅನ್ನಿಸಿಕೊಳ್ಳೋಕೆ ಹೆಮ್ಮೆ ಇದೆ. ಯಡಿಯೂರಪ್ಪರಂತೆ ಪಕ್ಷಕ್ಕೆ ಅನೇಕ ಹಿರಿಯರ ಶ್ರಮ ಇದೆ. ಸಂಘಟನೆಯ ಶಕ್ತಿಯಿಂದ ಈ ಪಕ್ಷ ಈ ಮಟ್ಟಕ್ಕೆ ಬಂದಿದೆ. ಬಿಜೆಪಿಯನ್ನು ಇನ್ನೂ ಸದೃಢಗೊಳಿಸಲು ಕೆಲಸ ಮಾಡುತ್ತೇನೆ ಎಂದರು.
ಲೋಕಸಭೆ ಚುನಾವಣೆಯಲ್ಲಿ 25ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಯಾವಾಗಲೂ ಗುರಿ ಇಟ್ಟರೆ ಹಿಂದೆ ಸರಿಯುವುದಿಲ್ಲ. ಅವರ ಮಾತಿನಂತೆ 25 ಸ್ಥಾನಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ವಿಜಯೇಂದ್ರ ರಾಜ್ಯಾಧ್ಯಕ್ಷ ನೇಮಕದಿಂದ ಸೋಮಣ್ಣ ಅಸಮಧಾನಗೊಂಡ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಇದರಲ್ಲಿ ಯಾರದ್ದು ವ್ಯೆಯಕ್ತಿಕ ಪ್ರತಿಷ್ಠೆ ಅನ್ನೋದಿಲ್ಲ. ಪಕ್ಷ ಅಂದ ಮೇಲೆ ಎಲ್ಲರೂ ಒಟ್ಟಾಗಿ ಹೋಗಬೇಕು ಎಂದರು.
ಇದನ್ನೂ ಓದಿ: ವಿಜಯೇಂದ್ರ ಕರ್ನಾಟಕ ಬಿಜೆಪಿಯ ನೂತನ ಸಾರಥಿ: ಮೋದಿ, ಶಾ, ಸಂತೋಷ್ಗೆ ಧನ್ಯವಾದ ಹೇಳಿದ BYV
ವಿಜಯೇಂದ್ರ ಆಯ್ಕೆ ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಸಿಎಂ ಎಸ್.ಎಂ ಕೃಷ್ಣ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ದೂರವಾಣಿ ಕರೆ ಮಾಡಿ ವಿಜಯೇಂದ್ರಗೆ ಶುಭ ಕೋರಿದರು. ಇವರ ಜೊತೆ ಹೊಸ ದೋಸ್ತಿಯಾಗಿರುವ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ದೂರವಾಣಿ ಕರೆ ಮಾಡಿ ಶುಭ ಕೋರಿದ್ದಾರೆ.