ಬೆಂಗಳೂರು : ಹಾಳಾದ್ ಸಣ್ಣ ಮಳೆಯಾದ್ರೂ ಬೆಂಗಳೂರಿಗರು ಪಡುವ ತಾಪತ್ರಯಗಳು ಒಂದೆರಡಲ್ಲ. ಅದಕ್ಕಾಗಿ ಬೊಮ್ಮನಹಳ್ಳಿ ವಲಯದ ವಾಡ್೯ 188ರ ಬಿಲೇಕಹಳ್ಳಿ ವಾಡ್೯ನ ಅನುಗ್ರಹ ಬಡಾವಣೆಯ ಸುತ್ತಮುತ್ತ ಮೇಯರ್ ಗಂಗಾಂಬಿಕಾ ತಪಾಸಣೆ ನಡೆಸಿದರು.
ಬಡಾವಣೆಯ ವ್ಯಾಪ್ತಿಯಲ್ಲಿ BWSSB ವತಿಯಿಂದ ಸ್ಯಾನಿಟರಿ ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಅದನ್ನ ಚುರುಕುಗೊಳಿಸಿ ಪೂರ್ಣಗೊಳಿಸುವಂತೆ BWSSB ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಅವ್ಯವಸ್ಥೆಯಿಂದಾಗಿ ಮನೆಯ ಸ್ಯಾನಿಟರಿ ನೀರನ್ನು ಚರಂಡಿಯಲ್ಲಿ ಹರಿಸುತ್ತಿದ್ದು, ಸದರಿ ಸ್ಯಾನಿಟರಿ ನೀರು ನೇರವಾಗಿ ಬೃಹತ್ ನೀರುಗಾಲುವೆಗೆ ಹರಿಯುತ್ತಿದೆ. ಇದರಿಂದಾಗಿ ಮಳೆಗಾಲದಲ್ಲಿ ಸದರಿ ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ರಸ್ತೆಗೆ, ಕೆಳ ಅಂತಸ್ತಿನ ಮನೆಗಳಲ್ಲಿನ ಟ್ಯಾಂಕ್ ಹಾಗೂ ಮನೆಗಳಿಗೆ ನೀರುಗಾಲುವೆಯಿಂದ ನೀರು ನುಗ್ಗಿ ಹೆಚ್ಚಿನ ಅನಾಹುತ ಸಂಭವಿಸುತ್ತವೆ. ಅದರಿಂದಾಗಿ BWSSB ಒಂದೇ ಬಾರಿಗೆ 6-7 ಜೆಟ್ ಮೆಷಿನ್ಗಳಿಂದ ಸ್ವಚ್ಛಗೊಳಿಸುವಂತೆ ಆದೇಶಿಸಿದರು.
ತದನಂತರ, ಒಎಫ್‌ಸಿ ಕೇಬಲ್ ಅಳವಡಿಸಲು ರಸ್ತೆಗಳು ಹಾಳಾಗಿದ್ದು, ಸದರಿ ರಸ್ತೆಯನ್ನು ಸರಿಪಡಿಸಿ ರಸ್ತೆ ಡಾಂಬರೀಕರಣ ಮಾಡುವಂತೆ ಸ್ಥಳದಲ್ಲಿದ್ದ ಮುಖ್ಯ ಅಭಿಯಂತರರಿಗೆ ಸೂಚಿಸಿದರು. ಅಲ್ಲದೇ ರಸ್ತೆಯ ಪಕ್ಕದಲ್ಲಿದ್ದ ಟ್ರಾನ್ಸ್‌ಫಾರ್ಮರ್ ಸಾರ್ವಜನಿಕರಿಗೆ ಅಪಾಯವಾಗುವ ಸ್ಥಿತಿಯಲ್ಲಿದ್ದು, ಅದನ್ನ ಬದಲಾಯಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.