ಬೆಂಗಳೂರು: ವಿಧಾನಸಭೆ ಉಪಚುನಾವಣೆ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಗರಿಗೆದರಿವೆ. ಪಕ್ಷದೊಳಗಿದ್ದ ಟಿಕೆಟ್ ಆಕಾಂಕ್ಷಿಗಳ ಅಸಮಾಧಾನವನ್ನು ಶಮನಗೊಳಿಸಿಕೊಂಡು ಅಭ್ಯರ್ಥಿ ಪರ ನಿಲ್ಲುವ ಕಸರತ್ತು ತೀವ್ರಗೊಂಡಿದೆ.
ಸದ್ಯ, ಜೆಡಿಎಸ್‌ಗೆ ಗುಡ್ ಬೈ ಹೇಳಿ, ಕಮಲ ಹಿಡಿದಿರುವ ಗೋಪಾಲಯ್ಯ ಸತತ ಮೂರು ಬಾರಿ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಮತದಾರರನ್ನು ತಮ್ಮ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡು ಬಂದಿದ್ದಾರೆ. ಈಗ ಪಕ್ಷ ಬದಲಿಸಿರುವ ಗೋಪಾಲಯ್ಯರಿಂದ ಬಿಜೆಪಿಗೆ ಮಹಾ 'ಲಕ್ಷ್ಮೀ' ಕ್ಷೇತ್ರ ಸಿಗಲಿದೆಯೇ? ಎಂಬ ಮಾತುಗಳು ಕೇಳಿ ಬರುತ್ತಿವೆ.
ಯಾಕೆಂದರೆ ಮಹಾಲಕ್ಷ್ಮೀ ಲೇಔಟ್ನಲ್ಲಿ 1967 ರಿಂದಲೂ ಬಿಜೆಪಿಗೆ ಅಸ್ತಿತ್ವವಿಲ್ಲ. ಆದರೆ 2008 ರಲ್ಲಿ ಆರ್. ವಿ. ಹರೀಶ್ ಬಿಜೆಪಿಯಿಂದ ಸ್ಪರ್ಧಿಸಿ ನೆ.ಲ ನರೇಂದ್ರ ಬಾಬು ವಿರುದ್ಧ 3,225 ಮತಗಳಿಂದ ಸೋಲು ಅನುಭವಿಸಿದರು. ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವಿನ ಸನಿಹ ಬಂದಿದ್ದು ಇದೇ ಫಲಿತಾಂಶದಲ್ಲಿ.
ನಂತರ 2018 ರಲ್ಲೂ ವಲಸೆ ಅಭ್ಯರ್ಥಿಗೆ ಮಣೆ ಹಾಕಿದರೂ ಕೂಡ ಬಿಜೆಪಿಗೆ ಲಕ್ಷ್ಮಿ ಜಾಗ ಆವರಿಸಲು ಆಗಲಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಅಂದರೆ 2018 ರ ವಿಧಾನಸಭಾ ಚುನಾವಣೆ. ಈ ವೇಳೆ ಕಾಂಗ್ರೆಸ್ನಲ್ಲಿದ್ದ ನೆ.ಲ. ನರೇಂದ್ರ ಬಾಬು ಅವರನ್ನು ಸೆಳೆದು ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ಕಾಂಗ್ರೆಸ್ನಲ್ಲಿದ್ದಾಗ ಗೆಲುವಿನ ರುಚಿ ಅನುಭವಿಸಿದ ನರೇಂದ್ರ ಬಾಬು, ಬಿಜೆಪಿಗೆ ಬಂದು ಸೋಲು ಅನುಭವಿಸಿದರು. ಜೆಡಿಎಸ್‌ನ ಗೋಪಾಲಯ್ಯ ಅವರಿಗೆ ಅಲ್ಲಿನ ಮತದಾರರು ಮಣೆ ಹಾಕಿ, ನರೇಂದ್ರ ಬಾಬು ಅವರನ್ನು 41,000 ಮತಗಳಿಂದ ಸೋಲಿಸಿದರು.
ಈಗ ಅದೇ ನೆಲದಲ್ಲಿ ಹಳೇ ಅಭ್ಯರ್ಥಿ, ಹೊಸ ಪಕ್ಷದಿಂದ ಅಖಾಡಕ್ಕೆ ಇಳೀತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಉತ್ತಮ ಮತಗಳು ಬರುತ್ತೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಿನ ರುಚಿ ತಿಂದಿದ್ದಾರೆ. ಸದ್ಯ ನಾಳೆ ಬಿಜೆಪಿಯಿಂದ ಗೋಪಾಲಯ್ಯ ನಾಮಪತ್ರ ಸಲ್ಲಿಸಲಿದ್ದು, ಮಹಾಲಕ್ಷ್ಮಿ ಲೇಔಟ್ನಲ್ಲಿ ಬಿಜೆಪಿಗೆ ಸಿಗುತ್ತಾ ಮೊದಲ ಗೆಲುವು ಅನ್ನೋದನ್ನು ಮತದಾರರು ನಿರ್ಧರಿಸಬೇಕಿದೆ. ಇದಕ್ಕೆ ಸ್ಪಷ್ಟ ಉತ್ತರ ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟವಾದಾಗ ತಿಳಿಯಲಿದೆ.