ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ವಿವಿಧೆಡೆ ಪ್ರಚಾರ ಸಭೆ ನಡೆಸಿದರು.
ಸ್ಥಳೀಯ ನಾಯಕರ ಜೊತೆ ಸೇರಿ ವಿವಿಧ ಕಡೆ ಪ್ರಚಾರ ಕಾರ್ಯ ನಡೆಸಿದ ಅವರು, ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ಒಂದೆರಡು ಕಡೆ ಪ್ರಚಾರ ಸಭೆ ನಡೆಸಿ ತಮಗೆ ಮತ ನೀಡುವಂತೆ ಮನವಿ ಮಾಡಿದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಟ್ಟಿಗೆಪಾಳ್ಯ ವಾರ್ಡ್ನಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಅವರು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಬೆಂಬಲ ಕೋರಿದರು. ಸಭೆಯಲ್ಲಿ ಕುಣಿಗಲ್ ಶಾಸಕರಾದ ಡಾ. ರಂಗನಾಥ್ ಹಾಗೂ ಮಾಜಿ ಸಚಿವ ನರೇಂದ್ರಸ್ವಾಮಿ ಉಪಸ್ಥಿತರಿದ್ದರು. ಈಗಾಗಲೇ ಪಕ್ಷದ ವೀಕ್ಷಕರಾಗಿ ನೇಮಕಗೊಂಡಿರುವ ವಿವಿಧ ಮುಖಂಡರು ತಮಗೆ ವಹಿಸಿದ ಪ್ರದೇಶಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಅಭ್ಯರ್ಥಿ ತಮ್ಮ ಭಾಗಕ್ಕೆ ಬಂದ ಸಂದರ್ಭ ಅವರ ಜತೆ ಪಾಲ್ಗೊಳ್ಳುತ್ತಿದ್ದಾರೆ.
ಇದಾದ ಬಳಿಕ ಜ್ಞಾನ ಭಾರತಿಯ ವಾರ್ಡ್ನಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಕುಸುಮಾ, ಮತದಾರರ ಬಳಿ ಮತಯಾಚಿಸಿದರಲ್ಲದೆ, ಕಾರ್ಯಕರ್ತರಿಂದ ಬೆಂಬಲ ಕೋರಿದರು. ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ, ಮಾಗಡಿಯ ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ, ಮಾಜಿ ಮೇಯರ್ ಮಂಜುನಾಥ ರೆಡ್ಡಿ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.