ಬೆಂಗಳೂರು: ರಾಜ್ಯದ 17 ರ ಪೈಕಿ 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಿರುಸುಗೊಂಡಿದೆ.
ಮಸ್ಕಿ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್ ಪಾಲಿಗೆ ಈ ಕ್ಷೇತ್ರಗಳ ಗೆಲುವು ಅತ್ಯಂತ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಚುನಾವಣೆ ಘೋಷಣೆಗೆ ಮುನ್ನವೇ ಸಾಕಷ್ಟು ಸಿದ್ಧತೆ ನಡೆಸಿರುವ ರಾಜಕೀಯ ಪಕ್ಷಗಳು ಇದೀಗ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಇನ್ನಷ್ಟು ಚುರುಕಾಗಿ ಕಾರ್ಯ ನಿರ್ವಹಣೆ ಆರಂಭಿಸಲಿವೆ.
17 ಕ್ಷೇತ್ರಗಳ ಪೈಕಿ 14 ಕ್ಷೇತ್ರವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಮರಳಿ ಆ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ತಂತ್ರ ಹೆಣೆಯುತ್ತಿದೆ. ಇದೀಗ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಕೂಡ ಹೊರಬಿದ್ದಿದೆ. ಸಾಕಷ್ಟು ಅಳೆದು - ತೂಗಿ ಪಕ್ಷ ನಿಷ್ಠೆಯನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ನಿಷ್ಠಾವಂತ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಕಾಂಗ್ರೆಸ್ ಸಂಭಾವ್ಯ ಪಟ್ಟಿ...
ಹೊಸಪೇಟೆ - ಪದ್ಮಾವತಿ ಬೈರತಿ
ಗೋಕಾಕ್ - ಲಕನ್ ಜಾರಕಿಹೊಳಿ
ಕಾಗವಾಡ - ಪ್ರಕಾಶ್ ಹುಕ್ಕೇರಿ
ಅಥಣಿ - ಎ.ಬಿ ಪಾಟೀಲ್
ಯಲ್ಲಾಪುರ - ಭೀಮಣ್ಣ ನಾಯ್ಕ್, ಪ್ರಶಾಂತ ದೇಶಪಾಂಡೆ
ರಾಣೆಬೆನ್ನೂರು - ಕೆ.ಬಿ ಕೋಳಿವಾಡ
ಚಿಕ್ಕಬಳ್ಳಾಪುರ - ಅಂಜೀನಪ್ಪ, ಡಾ. ಎಂ.ಸಿ.ಸುಧಾಕರ್
ಹೊಸಪೇಟೆ - ಸಂತೋಷ ಲಾಡ್, ನಾರಾಯಣ ರೆಡ್ಡಿ
ಕೆ.ಆರ್ ಪೇಟೆ - ಕೆ.ಬಿ ಚಂದ್ರಶೇಖರ್, ಕಿಕ್ಕೆರೆ ಶ್ರೀನಿವಾಸ
ಯಶವಂತಪುರ - ಎಂ ರಾಜಕುಮಾರ್, ಬಾಲಕೃಷ್ಣ
ಮಹಾಲಕ್ಷ್ಮಿ ಲೇಔಟ್ - ಮಂಜುನಾಥ್ ಗೌಡ, ಶಿವರಾಜು
ಹುಣಸೂರು - ಹೆಚ್ ಪಿ ಮಂಜುನಾಥ್
ಹೀರೆಕೆರೂರು - ಜಿ.ಡಿ ಪಾಟೀಲ್
ಇದು ಸದ್ಯ ಹೊರಬಿದ್ದಿದೆ ಎನ್ನಲಾಗುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಾಗಿದೆ. ಇನ್ನೂ ಒಂದೆರೆಡು ಸುತ್ತು ಸಭೆ ನಡೆಸಿದ ನಂತರ ಅಧಿಕೃತ ಅಭ್ಯರ್ಥಿಯ ಪಟ್ಟಿ ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ. ಜೆಡಿಎಸ್ ಕೂಡ ಸ್ವತಂತ್ರವಾಗಿ ಸ್ಪರ್ಧೆಗೆ ನಿರ್ಧರಿಸಿದೆ. ಈ ಹಿನ್ನೆಲೆ ಕಾಂಗ್ರೆಸ್ ತನ್ನ ಕ್ಷೇತ್ರಗಳಿಗೆ ಕೆಲವೆಡೆ ಜೆಡಿಎಸ್ ಮುಖಂಡರನ್ನು ಸೆಳೆಯುವ ಸಾಧ್ಯತೆ ಇದೆ. ಇದರ ಜೊತೆ ಜೊತೆಗೆ ಬಿಜೆಪಿ ನಾಯಕರನ್ನೂ ಸಹ ಸೆಳೆಯುವ ಪ್ರಯತ್ನ ಮುಂದುವರೆದಿದೆ.