ಬೆಂಗಳೂರು: ಹೈಟೆನ್ಶನ್ ತಂತಿ ಹಾದುಹೋಗಿರುವ ಆಸುಪಾಸಿನಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಾಣ ಮಾಡಬಾರದು ಎಂಬ ನಿಯಮವಿದ್ದರೂ ಕೂಡಾ ಅನಧಿಕೃತವಾಗಿ ಕೆಲವರು ಕಟ್ಟಡ ನಿರ್ಮಿಸುತ್ತಿದ್ದು ಹಲವರ ಸಾವಿಗೆ ಕಾರಣವಾಗಿದೆ.
ಹೈಟೆನ್ಶನ್ ವೈರ್ಗಳು ಕೆಆರ್ಪುರದ ಮುನೇಶ್ವರ ಬಡಾವಣೆ, ಅಯ್ಯಪ್ಪ ನಗರ, ಹೂಡಿ, ಬಸವನಪುರ, ಭಟ್ಟರಹಳ್ಳಿಯ ಮುಖಾಂತರ ಹಾದು ಹೋಗಿ ಹೂಡಿ ಸ್ಟೇಷನ್ ಸೇರುತ್ತದೆ. ಇನ್ನೂ ಈ ತಂತಿಗಳು ಹಾದು ಹೋಗಿರುವ ಕೆಲ ಬಡಾವಣೆಗಳಲ್ಲಿ ಕೈಗೆಟುಕುವಷ್ಟು ಸಮೀಪದಲ್ಲಿದ್ದು, ಇದು ನಿಜಕ್ಕೂ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲದೇ ತಂತಿಗಳು ಹಾದು ಹೋಗಿರುವ ಪಕ್ಕದಲ್ಲೆ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ.
ನಗರದಲ್ಲಿ ಭೂಮಿಗೆ ಬಂಗಾರಕ್ಕೂ ಮೀರಿದ ಬೆಲೆ ಇರುವುದೇನೊ ನಿಜ. ಆದರೇ, ಜಾಗ ಎಲ್ಲಿ ವ್ಯರ್ಥವಾಗುತ್ತದೊ ಎಂದು ಒಂದು ಅಡಿಯನ್ನು ಬಿಡದೇ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದುರದೃಷ್ಟ ಎಂದರೆ ಹೈಟೆನ್ಷನ್ ವೈರ್ಗಳ ಅವಘಡಗಳಿಗೆ ಬಲಿಯಾಗುತ್ತಿರುವುದು ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡ ಕೂಲಿ ಕಾರ್ಮಿಕರೆ ಹೊರತು ಕಟ್ಟಡ ಮಾಲಿಕರನಲ್ಲ.
ಕೇವಲ ಎರಡು ವರ್ಷಗಳಲ್ಲಿ 4-5 ಜನ ಇದೇ ಕಾರಣದಿಂದ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಮನೆ ಮೇಲೆ ಪೈಟಿಂಗ್ ಮಾಡುವ ವೇಳೆ ತಂತಿ ಸ್ಪರ್ಶಿಸಿ ಒರ್ವ ಮೃತಪಟ್ಟಿದ್ದ. ಆದರೆ, ಇಷ್ಟೆಲ್ಲಾ ಆದರೂ ಅಧಿಕಾರಿಗಳು ಮಾತ್ರ ಇಂತಹ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಮಾಯಕರ ಪ್ರಾಣಕ್ಕೆ ಕುತ್ತು ಬರದಂತೆ ಕಾಪಾಡಬೇಕಾಗಿದೆ.