ಬೆಂಗಳೂರು: ಈ ಬಜೆಟ್ ರೈತ ವಿರೋಧಿ, ವಿದ್ಯಾರ್ಥಿಗಳ ವಿರೋಧಿ, ಎಸ್ ಸಿ, ಎಸ್ ಟಿ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ, ಬಡವರ ವಿರೋಧಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ಬಜೆಟ್ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಜೆಟ್ ಜನ ವಿರೋಧಿಯಾಗಿದೆ. ಇದು ಬಡವರ ವಿರೋಧಿಯಾಗಿದೆ. ಈ ಬಜೆಟ್ ವಿರೋಧಿಸುತ್ತೇನೆ ಎಂದರು.
ಅಂದಾಜು 5.65 ಲಕ್ಷ ಕೋಟಿ ಸಾಲ: ಎಸ್ ಸಿಪಿ ಟಿ ಎಸ್ ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಆ ಮೂಲಕ ಹಗಲು ದರೋಡೆ ಆಗುತ್ತಿದೆ. ದುರ್ಬಲ ವರ್ಗದ ಜನರಿಗೆ ಅನುದಾನ ಕಡಿಮೆ ಮಾಡುತ್ತಿದ್ದಾರೆ. ಅಂದಾಜು 5.65 ಲಕ್ಷ ಕೋಟಿ ಸಾಲ ಆಗಲಿದ್ದು, 56,000 ಕೋಟಿ ಅಸಲು ಬಡ್ಡಿಗೆ ಕಟ್ಟಬೇಕಾಗಿದೆ ಎಂದಿದ್ದಾರೆ. 40% ಕಮಿಷನ್ ನಿಂದ ಸಾಲ ಹೆಚ್ಚಾಗುತ್ತಿದೆ. ಇದರಿಂದ ಗುಣಮಟ್ಟದ ಕೆಲಸ ಹೇಗೆ ಆಗುತ್ತದೆ?. ಯೋಜನಾ ವೆಚ್ಚ ಹೆಚ್ಚಾಗುತ್ತಲೇ ಇದೆ. ಬೆಂಗಳೂರಲ್ಲಿ 25,000 ಗುಂಡಿ ಬಿದ್ದಿವೆ. ಅದನ್ನು ಮುಚ್ಚಲು 7,300 ಕೋಟಿ ರೂ. ಖರ್ಚು ಮಾಡಿದ್ದಾರೆ.
ಕೇಂದ್ರ ಸರಕಾರದಿಂದ ಅನ್ಯಾಯ: ತೆರಿಗೆ ಹಂಚಿಕೆಯಲ್ಲಿ ದೊಡ್ಡ ಅನ್ಯಾಯ ಆಗಿದೆ. 37,250 ನಮಗೆ ಕೇಂದ್ರದ ತೆರಿಗೆ ಪಾಲು ಬರುತ್ತಿದೆ. 13,500 ಕೋಟಿ ಕೇಂದ್ರದ ಅನುದಾನ ಬರುತ್ತಿದೆ. ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಮಾತೆತ್ತಿದರೆ ನಮ್ಮದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಡಬಲ್ ಇಂಜಿನ್ ಸರ್ಕಾರದಿಂದ ನರಕ ಆಗಿದೆ. ಸಾಲ ಮಾಡಬೇಡಿ ಅನ್ನಲ್ಲ. ಅಭಿವೃದ್ಧಿ ಹೆಚ್ಚಾಗಬೇಕಾದರೆ ಸಾಲ ಮಾಡಬೇಕಾಗುತ್ತದೆ. ಆದರೆ ಸಾಲ ಸಿಗುತ್ತದೆ ಎಂದು ಸಾಲ ಮಾಡಬಾರದು. ನಮಗೆ ಕೇಂದ್ರದಿಂದ ಕನಿಷ್ಠ 1,04,000 ಕೋಟಿ ರೂ. ತೆರಿಗೆ ಪಾಲು ಬರಬೇಕು ಎಂದರು.
ಜಿಎಸ್‌ಟಿ ಅವೈಜ್ಞಾನಿಕ: ಜಿಎಸ್‌ಟಿ ವ್ಯವಸ್ಥೆ ಅವೈಜ್ಞಾನಿಕವಾಗಿದೆ. 2023-24 ರಲ್ಲಿ 4,72,000 ಕೋಟಿ ರಾಜ್ಯದಿಂದ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ನಮ್ಮಿಂದ ತಗೊಂಡು ಬೇರೆ ರಾಜ್ಯಕ್ಕೆ ಕೊಡಲಾಗುತ್ತದೆ. ನಮಗೆ ಬಹಳ ಕಡಿಮೆ ಕೇಂದ್ರಾನುದಾನ ಬರುತ್ತಿದೆ. ಅಸಲು ಮತ್ತು ಬಡ್ಡಿ ಹೆಚ್ಚಾಗುತ್ತಿದೆ. 56,463 ಕೋಟಿ ರೂ. ಪಾವತಿಸಬೇಕಾಗುತ್ತದೆ. ಅಂಬಾನಿ, ಅದಾನಿಗೆ ಸಾಲ ಮನ್ನಾ ಮಾಡುವುದರಿಂದಲೂ ಸಾಲ ಹೆಚ್ಚಾಗಿದೆ. ಏಳು ವರ್ಷದಲ್ಲಿ ಕೇಂದ್ರ ಬಂಡವಾಳ ಶಾಹಿಗಳಿಗೆ 25 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆ ನಿರ್ಲಕ್ಷ್ಯ: ಮೇಕೆದಾಟು ಯೋಜನೆಗೆ ಈ ಬಾರಿ ಏಕೆ ಅನುದಾನ ಕೊಟ್ಟಿಲ್ಲ?. ಕಳೆದ ಬಾರಿ 1000 ಕೋಟಿ ರೂ. ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅದನ್ನು ಈಗ ಬಜೆಟ್ ನಲ್ಲಿ ಏಕೆ ಸೇರಿಸಿಲ್ಲ?. ರಾಜ್ಯ ಸಾಲದ ಸುಳಿಯಲ್ಲಿ ಸಿಲುಕಿದೆ. 3,22,000 ಕೋಟಿ ರೂ. ನಾಲ್ಕು ವರ್ಷದಲ್ಲಿ ಸಾಲ ಮಾಡಿದ್ದೀರ. ರಾಜ್ಯ ಹಾಳು ಮಾಡಿದ್ದೀರ. ರಾಜ್ಯವನ್ನು ದಿವಾಳಿ ಮಾಡಿದ್ದೀರ. ನಾವು ಐದು ವರ್ಷದಲ್ಲಿ ಒಟ್ಟು 1,16,000 ಕೋಟಿ ರೂ. ಸಾಲ ಮಾತ್ರ ಮಾಡಿದ್ದೇವೆ. ಇದು ಕೇಂದ್ರ ಸರ್ಕಾರ ಮಾಡಿದ ದ್ರೋಹ ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ:LACಗೆ ಸೇನೆ ಕಳುಹಿಸಿದ್ದು ರಾಹುಲ್ ಗಾಂಧಿ ಅಲ್ಲ, ಮೋದಿ: ಸಚಿವ ಎಸ್.ಜೈಶಂಕರ್