ಬೆಂಗಳೂರು: ರಾಜೀನಾಮೆ ಕೊಟ್ಟು ಬಂದಿರುವ ಹತ್ತು ಮಂದಿ ನೂತನ ಶಾಸಕರನ್ನು ಮಾತ್ರ ನಾಳಿನ ಸಂಪುಟ ವಿಸ್ತರಣೆ ವೇಳೆ ಸೇರಿಸಿಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಎಷ್ಟು ಜನ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನುವ ಗೊಂದಲಕ್ಕೆ ಸಿಎಂ ತೆರೆ ಎಳೆದಿದ್ದಾರೆ. ಡಾಲರ್ಸ್ ಕಾಲೊನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ದೆಹಲಿಯಿಂದ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ರು,10 ಜನಕ್ಕೆ ಮಾತ್ರ ಸಚಿವ ಸಂಪುಟ ಸೇರ್ಪಡೆ ಮಾಡಿಕೊಳ್ಳಿ ಎಂದಿದ್ದಾರೆ. ಉಳಿದವರ ಬಗ್ಗೆ ದೆಹಲಿಗೆ ಬಂದು ಮಾತನಾಡಿ ಅಂದಿದ್ದಾರೆ. ಹಾಗಾಗಿ ನಾಳೆ 10 ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಉಮೇಶ್ ಕತ್ತಿ ನೂರಕ್ಕೆ ನೂರರಷ್ಟು ಮಂತ್ತಿ ಆಗ್ತಾರೆ. ನಾಳೆಯೇ ಅವರು ಪ್ರಮಾಣ ವಚನ ಸ್ವೀಕಾರ ಮಾಡಬೇಕಿತ್ತು. ಆದರೆ ಈಗ ಕೇವಲ ರಾಜೀನಾಮೆ ಕೊಟ್ಟು ಬಂದವರನ್ನು ಸೇರಿಸಿಕೊಳ್ಳಿ ಎಂದು ಹೈಕಮಾಂಡ್ ಹೇಳಿದೆ. ಹಾಗಾಗಿ ನಾಳೆ ಕತ್ತಿ ಪ್ರಮಾಣ ವಚನ ಸ್ವೀಕರಿಸುತ್ತಿಲ್ಲ ಆದರೆ ಮುಂದೆ ಅವರನ್ನು ಮಂತ್ರಿ ಮಾಡುತ್ತೇವೆ ಎಂದರು. ಮಹೇಶ್ ಕುಮಟಳ್ಳಿಗೆ ಈಗ ಸಚಿವ ಸ್ಥಾನ ಕೊಡೋದು ಕಷ್ಟ ಆಗುತ್ತದೆ, ಅವರನ್ನು ಕರೆದು ಮಾತನಾಡುತ್ತೇನೆ ಅವರಿಗೆ ಬೇರೆ ಜವಾಬ್ದಾರಿ ವಹಿಸುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ರು.