ಬೆಂಗಳೂರು : ಬಿ.ಎಲ್.ಸಂತೋಷ್ ವಿರುದ್ಧ ಜಗದೀಶ್ ಶೆಟ್ಟರ್ ಮಾಡಿರುವ ಆರೋಪ ನಿರಾಧಾರ. ಅವರು ಪಕ್ಷ ಬಿಟ್ಟು ಹೋಗಿದ್ದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವರೊಂದಿಗೆ ಬಿಜೆಪಿಯ ಯಾವುದೇ ಮುಖಂಡರು ಹೋಗಿಲ್ಲ. ಇನ್ನು ಮುಂದೆ ಅವರ ದಾರಿ ಅವರದು, ನಮ್ಮ ದಾರಿ ನಮ್ಮದು ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರದಲ್ಲಿ ಬಿ.ಎಲ್.ಸಂತೋಷ್ ಹೆಸರು ತಂದಿದ್ದು ಶೆಟ್ಟರ್‌ಗೆ ಶೋಭೆ ತರಲ್ಲ. ಬಿ.ಎಲ್ ಸಂತೋಷ್‌ರಿಂದ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪಿತೆಂಬ ಮಾತು ಸುಳ್ಳು. ಅವರನ್ನು ಎಲ್ಲ ರೀತಿಯಿಂದಲೂ ಮನವೊಲಿಸುವ ಪ್ರಯತ್ನವಾಯಿತು. ಆದರೆ ಅಂತಿಮವಾಗಿ ಪಕ್ಷ ಬಿಟ್ಟು ಹೋದರು. ಬಿಜೆಪಿಗೆ ಏನೂ ನಷ್ಟ ಆಗಲ್ಲ ಎಂದು ತಿರುಗೇಟು ನೀಡಿದರು. ಇದೇ ವೇಳೆ, ಅವರಿಗೆ ಟಿಕೆಟ್ ತಪ್ಪಿಸಿದ್ದಲ್ಲ, ಟಿಕೆಟ್ ಕೈ ತಪ್ಪಲು ಯಾರೂ ಕಾರಣರಲ್ಲ. ಅದು ಪಕ್ಷದ ನಾಯಕರ ತೀರ್ಮಾನ ಎಂದರು.
ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗೆ ಯಾವುದೇ ಹಿನ್ನಡೆ ಆಗದು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಸರ್ಕಾರ ರಚನೆ ಮಾಡುವುದು ನೂರಕ್ಕೆ ನೂರು ಸತ್ಯ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಹೇಳಿದರು. ಶಿವಮೊಗ್ಗ ಮತ್ತು ಮಾನ್ವಿ ಕ್ಷೇತ್ರದ ಟಿಕೆಟ್ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿ, ಇಂದು ಪಕ್ಷದ ವರಿಷ್ಠರು ಟಿಕೆಟ್ ಘೋಷಣೆ ಮಾಡಬಹುದು ಎಂದು ತಿಳಿಸಿದರು.
ನಾಳೆ ಶಿಕಾರಿಪುರದಿಂದ ವಿಜಯೇಂದ್ರ ನಾಮಪತ್ರ ಸಲ್ಲಿಸುತ್ತಿದ್ದಾರೆ. ಅದಕ್ಕಾಗಿ ನಾನು ಇಂದು ಶಿವಮೊಗ್ಗ ಹೋಗುತ್ತಿದ್ದೇನೆ. ನಾಳೆ ನಾಮಪತ್ರ ಸಲ್ಲಿಕೆಯ ನಂತರ ಒಂದೆರಡು ದಿನಗಳಲ್ಲಿ ಪ್ರಚಾರ ಆರಂಭಿಸುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ : ಎತ್ತಿನಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ -VEDIO