ಬೆಂಗಳೂರು: ಕರ್ನಾಟಕದ ನೂತನ ಲೋಕಾಯುಕ್ತರಾಗಿ ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಪ್ರಸಕ್ತ ಉಪಲೋಕಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಪಾಟೀಲ್ ಅವರನ್ನೇ ಲೋಕಾಯುಕ್ತರಾಗಿ ನೇಮಿಸಲಾಗಿದೆ. ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಭೀಮನಗೌಡ ಸಂಗನಗೌಡ ಪಾಟೀಲ್ ಹೆಸರನ್ನು ಶಿಫಾರಸು ಮಾಡಿದ್ದರು. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆ ಸ್ಪೀಕರ್, ವಿಧಾನಪರಿಷತ್ ಸಭಾಪತಿ ಹಾಗೂ ಉಭಯ ಸದನಗಳ ಪ್ರತಿಪಕ್ಷ ನಾಯಕರುಗಳ ಜೊತೆ ಸಮಾಲೋಚಿಸಿ ನಿರ್ಧಾರ ಕೈಗೊಂಡಿದ್ದರು. ಬಿ.ಎಸ್.ಪಾಟೀಲ್ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇದೇ ಜನವರಿ 27ರಂದು ಪಿ.ವಿಶ್ವನಾಥ್ ಶೆಟ್ಟಿ ಲೋಕಾಯುಕ್ತ ಸ್ಥಾನದಿಂದ ನಿವೃತ್ತರಾಗಿದ್ದರು. ಸುಮಾರು ನಾಲ್ಕೂವರೆ ತಿಂಗಳಿಂದ ಲೋಕಾಯುಕ್ತ ಸ್ಥಾನ ತೆರವಾಗಿತ್ತು.