ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದಿದ್ದ ಋಣಮುಕ್ತ ಕಾಯ್ದೆ ತಿದ್ದುಪಡಿ ಮಾಡಿ ಕಾನೂನು ಬದ್ದವಾಗಿ ಲೇವಾದೇವಿ ಮಾಡುತ್ತಿರುವ ಗಿರವಿ ವರ್ತಕರ ರಕ್ಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗಿರವಿ ವರ್ತಕರು ಮನವಿ ಸಲ್ಲಿಸಿದರು.
ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಗಿರವಿ ವರ್ತಕರ ನಿಯೋಗ ಸಿಎಂ ಜೊತೆ ಮಾತುಕತೆ ನಡೆಸಿತು. ಋಣಮುಕ್ತ ಕಾಯ್ದೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ನೆರವಿಗೆ ಬರುವಂತೆ ಮನವಿ ಸಲ್ಲಿಸಿತು.
ಚರ್ಚೆ ಬಳಿಕ ಮಾತನಾಡಿದ ಗಿರವಿ ವರ್ತಕರ ಸಲಹೆಗಾರ ಮತ್ತು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಋಣ ಮುಕ್ತ ಕಾಯ್ದೆ 2018 ನಮ್ಮ ಪಾಲಿಗೆ ಮರಣ ಶಾಸನ. ಇದರಿಂದ ಅನೇಕ ಗಿರವಿ ವರ್ತಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ನಾವು ಕಾನೂನು ಬದ್ದವಾಗಿ ವ್ಯವಹಾರ ನಡೆಸುತ್ತಿದ್ದೇವೆ. ಕೆಲವರು ಕಾನೂನು ಬಾಹಿರವಾಗಿ ಅನುಮತಿ ಇಲ್ಲದೇ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ನಮ್ಮಿಂದ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ, ಎಲ್ಲವನ್ನೂ ಸಿಎಂ ಅವರಿಗೆ ತಿಳಿಸಿದ್ದು, ಕಾಯ್ದೆ ತಿದ್ದುಪಡಿ ಮಾಡಲು ಕೋರಿದ್ದೇವೆ. ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ ಎಂದರು.