ಬೆಂಗಳೂರು: ಅನ್ನಭಾಗ್ಯ ಯೋಜನೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮಗಳಿಗೆ ಸರ್ಕಾರ ಶೀಘ್ರವಾಗಿ ಕಡಿವಾಣ ಹಾಕದಿದ್ದರೆ ಆಮ್ ಆದ್ಮಿ ಪಾರ್ಟಿಯು ದೊಡ್ಡ ಮಟ್ಟದ ಚಳವಳಿ ನಡೆಸಲಿದೆ ಎಂದು ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
ಬಡವರಿಗೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಟನ್‌ಗಟ್ಟಲೆ ಅಕ್ಕಿಯನ್ನು ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದೆ.
ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು 40% ಕಮಿಷನ್ ತೆಗೆದುಕೊಂಡು ಸುಮ್ಮನಾಗುತ್ತಿದೆ. ಸರ್ಕಾರದ ಕಮಿಷನ್ ದಾಹಕ್ಕೆ ಬಡವರು ತೊಂದರೆ ಅನುಭವಿಸುವಂತಾಗಿದೆ. ಹಣಕ್ಕಾಗಿ ಜನರ ಹಿತಾಸಕ್ತಿಯನ್ನು ಬಲಿಕೊಡುತ್ತಿರುವ ಜನವಿರೋಧಿ ಭ್ರಷ್ಟ ಸರ್ಕಾರವಿದು ಎಂದರು.
ಅನ್ನಭಾಗ್ಯ ಯೋಜನೆಯ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿ ಕಳೆದ ಮೂರು ವರ್ಷಗಳಲ್ಲಿ 800 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2020-21ರಲ್ಲಿ 65, 2021-22ರಲ್ಲಿ 472 ಹಾಗೂ 2022-23ರಲ್ಲಿ ಈವರೆಗೆ 300ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗುತ್ತಿದ್ದರೂ ಸರ್ಕಾರ ಮಾತ್ರ ಅಕ್ರಮ ತಡೆಯಲು ವ್ಯವಸ್ಥೆಗೆ ಯಾವುದೇ ಬದಲಾವಣೆ ತಂದಿಲ್ಲ. ಬದಲಾಗಿ, ಕಮಿಷನ್ ಲೂಟಿ ಮಾಡಲು ಇದನ್ನು ದಾರಿ ಮಾಡಿಕೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ:ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ: ವಯೋಮಿತಿ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ