ಬೆಂಗಳೂರು: ಒಡಿಶಾದಿಂದ ಏಜೆಂಟ್ ಮೂಲಕ ಕರೆ ತಂದಿದ್ದ ಆರು ಕುಟುಂಬಗಳನ್ನು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿರಿಸಿಕೊಂಡಿದ್ದ ದೇವನಹಳ್ಳಿ ಪಟ್ಟಣದ ನಾಗರಾಜು ಎಂಬಾತನಿಗೆ ಬೆಂಗಳೂರು ಗ್ರಾಮಾಂತರ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 3 ವರ್ಷ ಜೈಲು ಹಾಗೂ 52 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಆರೋಪಿ ನಾಗರಾಜ ತನ್ನ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಮಧ್ಯವರ್ತಿ ಶಶಿರಾಮ್ ಎಂಬುವನ ಮೂಲಕ ಒಡಿಶಾ ರಾಜ್ಯದ ಬಲಂಗೀರ್ ಜಿಲ್ಲೆಯಿಂದ ಒಟ್ಟು 12 ಮಂದಿಯನ್ನು ಕರೆಸಿದ್ದ. 2005 ರಿಂದ 2008 ರವರೆಗೆ ಒಟ್ಟು ಮೂರು ವರ್ಷಗಳ ಕಾಲ ಹೊರಗೆ ಎಲ್ಲೂ ಹೋಗಲು ಬಿಡದೇ ದಿನಕ್ಕೆ 14 ಗಂಟೆಗಳ ಕಾಲ ಇಟ್ಟಿಗೆ ಫ್ಯಾಕ್ಟರಿಯಲ್ಲಿ ದುಡಿಸಿಕೊಳ್ಳುತ್ತಿದ್ದ. ಜತೆಗೆ ಗುಂಪಿನಲ್ಲಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪವೂ ಇತ್ತು. ಈ ವಿಚಾರವನ್ನು ಪತ್ತೆ ಹಚ್ಚಿದ್ದ ಇಂಟರ್ ನ್ಯಾಷನಲ್ ಜಸ್ಟೀಸ್ ಮಿಷನ್(ಐಜೆಎಂ) ಎನ್.ಜಿ.ಒ ದೇವನಹಳ್ಳಿ ತಹಶೀಲ್ದಾರ್ ಹಾಗೂ ಠಾಣೆ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಣೆ ಮಾಡಿತ್ತು. ಆ ಬಳಿಕ ದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಇಟ್ಟಿಗೆ ಫ್ಯಾಕ್ಟರಿ ಮಾಲೀಕನಾದ ಆರೋಪಿಗೆ ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿರ್ಮೂಲನೆ) ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ 3 ವರ್ಷ ಜೈಲು ಶಿಕ್ಷೆ ಹಾಗೂ 52 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿರುವ ಐಜೆಎಂ ಸಹಾಯಕ ನಿರ್ದೇಶಕಿ ಪ್ರತಿಮಾ ಎಂ ಅವರು, ಈ ಪ್ರಕರಣದ ತೀರ್ಪಿಗೆ 12 ವರ್ಷಗಳ ಸುದೀರ್ಘ ಅವಧಿ ಹಿಡಿಯಿತಾದರೂ ಸಂತ್ರತ್ತರಿಗೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ನ್ಯಾಯಾಲಯ ಆಪಾದಿತನಿಗೆ ಜೀತ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಡಿ ಶಿಕ್ಷೆ ವಿಧಿಸಿರುವುದು ಗಮನಾರ್ಹ ಎಂದಿದ್ದಾರೆ.