ಬೆಂಗಳೂರು: ರಾಜ್ಯದಲ್ಲಿರುವ 205 ಮುಜರಾಯಿ ದೇವಸ್ಥಾನಗಳಲ್ಲಿ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ದೇವಾಲಯಗಳಿಗೆ ಬರುವ ತಾಯಂದಿರುಗಳಿಗೆ ತಮ್ಮ ಮಕ್ಕಳಿಗೆ ಹಾಲುಣಿಸುವ ಸಮಯದಲ್ಲಿ ಮುಜುಗರ ಉಂಟಾಗಬಾರದೆಂದು ಹಾಗೂ ಅವರಿಗೆ ಸಹಕಾರಿಯಾಗಲಿ ಎಂಬ ಉದ್ದೇಶದೊಂದಿಗೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಹಾಲುಣಿಸುವ ಕೊಠಡಿ ಮಾದರಿಯಲ್ಲೇ ರಾಜ್ಯದ ಮುಜರಾಯಿ ಇಲಾಖೆಯ ಎಲ್ಲ ಎ ದರ್ಜೆ ದೇವಾಲಯಗಳಲ್ಲಿ ಇಂತಹ ವ್ಯವಸ್ಥೆ ಜಾರಿಗೊಳಿಸಲು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಗರದ ಬನಶಂಕರಿ ದೇವಾಲಯದ ಆವರಣದಲ್ಲಿ "ಅಮ್ಮನಿಗೆ ಗೌರವ"ಎಂಬ ಶೀರ್ಷಿಕೆಯಡಿ ಹಾಲುಣಿಸುವ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮುಜರಾಯಿ ಇಲಾಖೆ ಅನುದಾನ ಕಡಿತದ ಬಗ್ಗೆ ಇಲಾಖೆಯ ಆಯುಕ್ತರ ಆದೇಶವು ಗೊಂದಲಕ್ಕೆ ಕಾರಣವಾಗಿದೆ. ತಕ್ಷಣವೇ ಈ ಆದೇಶ ಹಿಂಪಡೆದಿದ್ದೇವೆ ಎಂದು ಹೇಳಿದರು.
ಸೋಮವಾರ ಆಟೋ ಸಂಘಟನೆಗಳ ಜೊತೆ ಸಿಎಂ ಸಭೆ ಮಾಡುತ್ತಾರೆ. ಆಟೋ ಸಂಘಟನೆಗಳು, ಮ್ಯಾಕ್ಸಿ ಕ್ಯಾಬ್ ಸಂಘಟನೆಗಳೊಂದಿಗೆ ಈಗಾಗಲೇ ಮೂರು ಸಭೆ ನಡೆಸಿದ್ದೇನೆ. ಸಿಎಂ ಜೊತೆಗಿನ ಸಭೆಯಲ್ಲಿ ಆಟೋ ಸಂಘಟನೆಗಳ ಬೇಡಿಕೆ ಈಡೇರುತ್ತದೆ. ನಮ್ಮ ಸರ್ಕಾರ ಸಂಘಟನೆಗಳ ಬೇಡಿಕೆ ಈಡೇರಿಸಲು ಬದ್ಧವಾಗಿದೆ. ಆಟೋ, ಕ್ಯಾಬ್ಗೆ ದರ ನಿಗದಿ ಮಾಡಲು ಸರ್ಕಾರವು ಆದಷ್ಟು ಶೀಘ್ರದಲ್ಲಿ ಆ್ಯಪ್ ಬಿಡುಗಡೆ ಮಾಡಲಿದೆ ಎಂದ ರಾಮಲಿಂಗಾರೆಡ್ಡಿ, ಶಕ್ತಿ ಯೋಜನೆಯಿಂದ ಮುಜರಾಯಿ ಇಲಾಖೆಗೆ ಆದಾಯ ವಿಚಾರವಾಗಿ ಮಾತನಾಡಿ, ನಿರೀಕ್ಷೆಗೂ ಮೀರಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಶೀಘ್ರದಲ್ಲೇ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಹೇಳಿದರು.
ಶಾಸಕರ ಘರ್ ವಾಪಸಿ ವಿಚಾರದ ಪ್ರಶ್ನೆಗೆ ಉತ್ತರಿಸುತ್ತ, ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರಿದವರು ನಮ್ಮಲ್ಲಿ ಸ್ವಚ್ಛಂದವಾಗಿ ಇದ್ದರು. ಪಕ್ಷದ ಮುಕ್ತ ವಾತಾವರಣದಲ್ಲಿ ಫ್ರೀ ಬರ್ಡ್ಸ್ ಆಗಿದ್ದರು. ಆದರೆ ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣದ ಅನುಭವ ಅವರಿಗೆ ಆಗಿದೆ. ಕೆಲವು ಶಾಸಕರು ಈ ಕುರಿತು ನನ್ನನ್ನು ಸಂಪರ್ಕ ಮಾಡಿದ್ದಾರೆ. ಯಾರೆಲ್ಲ ಸಂಪರ್ಕಿಸಿದ್ದಾರೆ ಎನ್ನುವುದನ್ನು ಸೂಕ್ತ ಸಮಯದಲ್ಲಿ ಹೇಳುತ್ತೇನೆ, ವಾಪಾಸ್ ಪಕ್ಷಕ್ಕೆ ಸೇರ್ಪಡೆ ಕುರಿತಂತೆ ಡಿಸಿಎಂ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಬನಶಂಕರಿ ದೇವಾಲಯದ ಅಧ್ಯಕ್ಷ ಎ.ಎಚ್. ಬಸವರಾಜ್ ಮಾತನಾಡಿ, ನಮ್ಮ ವ್ಯವಸ್ಥಾಪಕನ ಸಮಿತಿ ಅಸ್ತಿತ್ವಕ್ಕೆ ಬಂದ ಕೂಡಲೇ ನಮ್ಮ ಮೊದಲ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ವಾಸವಿ ಕ್ಲಬ್ ಅವರಿಗೆ ಮನವಿ ಮಾಡಿದ್ದೆವು. ಅದರಂತೆ ಮುಜರಾಯಿ ಇಲಾಖೆಯ ಅನುಮತಿ ಪಡೆದು ಉದ್ಘಾಟನೆ ಮಾಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬನಶಂಕರಿ ದೇವಸ್ಥಾನದ ಪದಾಧಿಕಾರಿಗಳಾದ ಹನುಮಂತರಾಯಪ್ಪ, ಎಲ್. ಶೋಭಾ, ಸುಗುಣ ಬಾಲಕೃಷ್ಣ, ಪ್ರಧಾನ ಅರ್ಚಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : 3D Printed Post Office: ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ