ಅಭಿನಯ ಚತುರ ನೀನಾಸಂ ಸತೀಶ್ ಹಾಗೂ 'ಶಾನೆ ಟಾಪ್ ಆಗಿರೋ ಹುಡುಗಿ' ಅದಿತಿ ಪ್ರಭುದೇವ ಅಭಿನಯದ 'ಬ್ರಹ್ಮಚಾರಿ' ಚಿತ್ರದ ಹವಾ ಸ್ಯಾಂಡಲ್ವುಡ್ನಲ್ಲಿ ಜೋರಾಗಿದೆ. 'ಬ್ರಹ್ಮಚಾರಿ' ಚಿತ್ರದ ಟ್ರೇಲರ್ ಹಾಗೂ 'ಹಿಡ್ಕ ಹಿಡ್ಕ ವಸಿ ಹಿಡ್ಕ' ಲಿರಿಕಲ್ ಸಾಂಗ್‌ಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದಲ್ಲಿನ ಸತೀಶ್ ಪಾತ್ರ, ಅವರ ಪಜೀತಿಯನ್ನು ಸಿನಿಪ್ರಿಯರು ಎಂಜಾಯ್ ಮಾಡಲಿದ್ದಾರೆ.
ಸದ್ಯ ಬಿಡುಗಡೆಗೆ ರೆಡಿ ಆಗಿರುವ ಬ್ರಹ್ಮಚಾರಿ ಸೆನ್ಸಾರ್ ಬೋರ್ಡ್ ಅಂಗಳದಲ್ಲಿದೆ. ಇಂದು ಬ್ರಹ್ಮಚಾರಿ ಚಿತ್ರತಂಡ 'ಆರಂಭ ಆರಂಭ ಹೊಸದಾದ ಮಿಲನ' ಎಂಬ ಮೆಲೋಡಿ ಲಿರಿಕಲ್ ವಿಡಿಯೋ ಲಾಂಚ್ ಮಾಡಿದೆ. ಈ ಹಾಡನ್ನು ಚಿತ್ರತಂಡ ತುಂಬಾ ವಿಶೇಷವಾಗಿ ಲೈವ್ ಸ್ಟೇಜಿನಲ್ಲಿ ಹಾಡುವ ಮೂಲಕ ಲೋಕಾರ್ಪಣೆಗೊಳಿಸಿದೆ. ಸಂಚಿತ್ ಹೆಗಡೆ ಹಾಗೂ ಸುಪ್ರಿಯಾ ರಾಮ್ ಈ ಹಾಡು ಹಾಡಿದ್ದು ಲೈವ್ ಪ್ರೋಗ್ರಾಮ್ ನಲ್ಲೂ ಅವರೇ ಹಾಡುವ ಮೂಲಕ ಗಮನ ಸೆಳೆದರು.
ತುಂಬಾ ವಿಭಿನ್ನವಾಗಿ ಚಿತ್ರದ ಪ್ರಮೋಶನ್‌ಗೆ ಹೆಲ್ಪ್ ಆಗುವ ರೀತಿಯಲ್ಲಿ ಚಿತ್ರತಂಡ ನಗರದ ಶಾಪಿಂಗ್ ಮಾಲ್ ಒಂದರಲ್ಲಿ ಈ ಹಾಡನ್ನು ಜನಗಳ ಮಧ್ಯೆ ಜನರಿಗೆ ಅರ್ಪಿಸಿದ್ರು. ಕಾರ್ಯಕ್ರಮದಲ್ಲಿ ನವೀನ್ ಸಜ್ಜು ಕೂಡಾ ಒಂದು ಹಾಡು ಹಾಡಿ ಅಲ್ಲಿ ನೆರೆದಿದ್ದ ಜನರನ್ನು ರಂಜಿಸಿದರು. ನಟಿ ಅದಿತಿ ಪ್ರಭುದೇವ್, ನವೀನ್ ಸಜ್ಜು, ಸಂಚಿತ್ ಹೆಗಡೆ, ಸುಪ್ರಿಯಾ ರಾಮ್, ನಿರ್ದೇಶಕ ಚಂದ್ರಮೋಹನ್ ಹಾಗೂ ಸಂಗೀತ ನಿರ್ದೇಶಕ ಧರ್ಮವಿಶ್ ಉಪಸ್ಥಿತರಿದ್ದರು.
ಮದುವೆಯಾಗಿರುವ ವ್ಯಕ್ತಿ ಯಾರಿಗೂ ಹೇಳಿಕೊಳ್ಳಲಾಗದ ನೋವನ್ನು ಹೇಗೆ ಪರಿಹಾರ ಮಾಡಿಕೊಳ್ಳುತ್ತಾನೆ ಎಂಬುದನ್ನು ಹಾಸ್ಯಲೇಪಿತ ವಾಗಿ ಹೇಳುವ ಪ್ರಯತ್ನ ಇಲ್ಲಿದೆ. ಇದರ ಜೊತೆಗೆ ಸಾಮಾಜಿಕ ಸಂದೇಶವನ್ನು ಚಿತ್ರದ ಮೂಲಕ ಕೊಡಲು ಪ್ರಯತ್ನಿಸಿದ್ದೇವೆ ಎಂದು ಚಿತ್ರತಂಡ ಹೇಳುತ್ತಿದೆ. ಸದ್ಯ ಚಿತ್ರತಂಡ ಸೆನ್ಸಾರ್ ಬೋರ್ಡ್ ಕದ ತಟ್ಟಿದ್ದು ಗ್ರೀನ್ ಸಿಗ್ನಲ್ ಸಿಕ್ಕ ತಕ್ಷಣ ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಮಾಡುವುದಾಗಿ ನಿರ್ಮಾಪಕ ಉದಯ ಮೆಹ್ತಾ ತಿಳಿಸಿದ್ದಾರೆ.