ಬೆಂಗಳೂರು: ಬಿರುಕು ಮೂಡಿದ್ದ ಕೆ.ಆರ್.ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಬಾಲಕನ ಮೇಲೆ ಟ್ರಕ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್ಟೇಬಲ್ ಸಂತೋಷ್ ಅವರ ಪುತ್ರ ಜೀವನ್ (10) ಮೃತ ಬಾಲಕ.
ಸಂತೋಷ್ ಅವರು ಕಳೆದ 15 ದಿನಗಳ ಹಿಂದೆ ಬೇಗೂರು ಠಾಣೆಗೆ ವರ್ಗವಾಗಿದ್ದರು. ಕೆಆರ್ ಪುರ ಸಂಚಾರಿ ಠಾಣೆ ಹಿಂಭಾಗದಲ್ಲಿರುವ ಪೊಲೀಸ್ ಕ್ವಾರ್ಟಸ್ನಲ್ಲಿ ವಾಸವಾಗಿದ್ದರು. 4 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಜೀವನ್ ಹಾಗೂ ತಂದೆ ಸಂತೋಷ್ ಕೆಲಸದ ಸಲುವಾಗಿ ಕೆಆರ್ ಪುರ ಬಳಿಯ ಸಾಯಿಗೋಲ್ಡ್ ಪ್ಯಾಲೇಸ್ ಮುಂಭಾಗ ಬೈಕ್ನಲ್ಲಿ ಹೋಗುತ್ತಿದ್ದರು.
ಬಿರುಕು ಮೂಡಿ ರಸ್ತೆ ಮೇಲಿದ್ದ ಜಲ್ಲಿಕಲ್ಲುಗಳ ಮೇಲೆ ಬೈಕ್ ಹತ್ತಿಸಿದ ಪರಿಣಾಮ ಸ್ಕಿಡ್ ಆಗಿ ಬಿದ್ದಿದ್ದಾರೆ. ಹಿಂಬದಿಯಿಂದ ಬರುತ್ತಿದ್ದ ಮಿಲಿಟರಿಗೆ ಸೇರಿದ ಟ್ರಕ್ ಚಾಲಕ ಬಾಲಕ ಜೀವನ್ ಮೇಲೆ ಗಾಡಿ ಹತ್ತಿಸಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ತಂದೆ ಸಂತೋಷ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಈ ಬೈಕ್ ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಿಂದ ಚಾಲಕ ಎಸ್ಕೇಪ್ ಆಗಿದ್ದಾನೆ. ಅಪಘಾತದ ಹಿನ್ನೆಲೆಯಲ್ಲಿ ಕಿಲೋಮೀಟರ್ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಜಕಾರಣಿಗಳಿಗೆ ಟಕ್ಕರ್ ಕೊಡಲು ಮುಂದಾದ ರೌಡಿ ಶೀಟರ್ಸ್: ಬಿಬಿಎಂಪಿಯಲ್ಲಿ ಪಾರುಪತ್ಯ ಮೆರೆಯಲು ತೆರೆಮರೆಯಲ್ಲಿ ತಯಾರಿ
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕೆ.ಆರ್.ಪುರ ವಾರ್ಡ್ನ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ದಿಲೀಪ್ , ನಿತ್ಯ ಲಕ್ಷಾಂತರ ವಾಹನಗಳು ಓಡಾಡುವ ರಸ್ತೆ ಸರಿಯಾಗಿ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ. ಉತ್ತಮವಾದ ರಸ್ತೆ ಇದ್ದಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ.. ಬಾಲಕನ ಸಾವಿಗೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.