ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿ ತಮ್ಮ ನಿವಾಸಕ್ಕೆ ಆಗಮಿಸಿದ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬದವರು ಆರತಿ ಬೆಳಗಿ ಭವ್ಯ ಸ್ವಾಗತ ಕೋರಿದರು.
ಮಂಗಳವಾರ ರಾತ್ರಿ ಬಿಜೆಪಿ ಕಚೇರಿ, ಯಡಿಯೂರಪ್ಪನವರ ನಿವಾಸ ಭೇಟಿ ಮುಗಿಸಿಕೊಂಡು ಮನೆಗೆ ಮರಳಿದ ಬಸವರಾಜ ಬೊಮ್ಮಾಯಿಯವರನ್ನು ಹರ್ಷೋದ್ಘಾರಗಳಿಂದ ಸ್ವಾಗತಿಸಲು ಕುಟುಂಬ ವರ್ಗದವರು ಸಿದ್ಧರಾಗಿ ನಿಂತಿದ್ದರು. ಮನೆ ಬಾಗಿಲಿಗೆ ಬರುತ್ತಿದ್ದಂತೆ ಶುಭಾಶಯಗಳ ಸುರಿಮಳೆಗರೆದರು. ಅವರ ಪತ್ನಿ ಚೆನ್ನಮ್ಮ ಬೊಮ್ಮಾಯಿ ಮಕ್ಕಳೊಂದಿಗೆ ಆರತಿ ಬೆಳಗಿ ಸಂತಸ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಪತಿಗೆ ಮುಖ್ಯಮಂತ್ರಿ ಪದವಿ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಸಚಿವರಾಗಿಯೇ ಬಹಳ ಬ್ಯುಸಿ ಆಗಿರುತ್ತಿದ್ದರು. ಮುಖ್ಯಮಂತ್ರಿಯಾದ ಮೇಲೆ ಮತ್ತಷ್ಟು ಬ್ಯುಸಿಯಾಗಿ ಬಿಡುತ್ತಾರೆ ಎಂದು ನಗುಮುಖದಿಂದಲೇ ಹೇಳಿದರು. ಮುಖ್ಯಮಂತ್ರಿಯಾದರೂ ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಳ್ಳದೇ ಮೊದಲಿನಿಂದಲೂ ವಾಸವಾಗಿರುವ ಆರ್ಟಿ ನಗರದ ಸ್ವಂತ ಮನೆಯಲ್ಲಿಯೇ ತಂಗುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.
ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾರೆಂಬ ಭರವಸೆಯಿದೆ:
ಅವರು ಇಷ್ಟು ವರ್ಷಗಳ ಕಾಲ ಪಟ್ಟಿರುವ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಈಗಾಗಲೇ ನೀರಾವರಿ ಸಚಿವರಾಗಿದ್ದರು ಮತ್ತು ಗೃಹ ಸಚಿವರಾಗಿ ಕೋವಿಡ್ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಾರೆಂಬ ಭರವಸೆಯಿದೆ. ಅವರ ಅವಧಿಯಲ್ಲಿ ಮಹಿಳೆಯರ ಅಭಿವೃದ್ದಿಗೆ ಕೆಲಸ ಮಾಡಲು ಸಲಹೆ ನೀಡುವುದಾಗಿ ಪತ್ನಿ ಚೆನ್ನಮ್ಮ ತಿಳಿಸಿದ್ದಾರೆ.
ಎಲ್ಲರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲಿ:
ರಾಜ್ಯದ ಎಲ್ಲಾ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿ ಪತ್ನಿಯಾಗಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೋರುವುದಾಗಿ ಚೆನ್ನಮ್ಮ ಹೇಳಿದ್ದಾರೆ. ಅವರಿಗೆ ಸಚಿವರಾಗಿ ಇರುವ ರಾಜಕೀಯ ಅನುಭವದಿಂದ ಯಶಸ್ವಿ ಸಿಎಂ ಆಗಲಿದ್ದಾರೆ ಎಂದು ಚೆನ್ನಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1988-89ರ ಅವಧಿಯಲ್ಲಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಸಹ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದರು. ಬಸವರಾಜ್ ಬೊಮ್ಮಾಯಿ ಅವರಿಗೆ ಉತ್ತಮ ಕೆಲಸ ಮಾಡಲು ಅವರ ತಂದೆಯ ಪ್ರಭಾವ ಪ್ರೇರಣೆಯಾಗಲಿದೆ ಎಂದು ಚೆನ್ನಮ್ಮ ಅಭಿಪ್ರಾಯಪಟ್ಟರು.
ಪುತ್ರ ಖುಷ್:
ತಂದೆ ಬಸವರಾಜ್ ಬೊಮ್ಮಾಯಿ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಒಮ್ಮತದಿಂದ ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇದಕ್ಕೂ ಮುನ್ನ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಸುಳಿವು ಸಹ ನಮಗೆ ಇರಲಿಲ್ಲ. ಮಾಧ್ಯಮಗಳಲ್ಲಿ ಬೊಮ್ಮಾಯಿ ಅವರೇ ರಾಜ್ಯದ ಸಿಎಂ ಎಂಬ ಸುದ್ದಿ ನೋಡಿದಾಗ ತುಂಬಾ ಸಂತಸವಾಯಿತು ಎಂದು ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಖುಷಿ ಹಂಚಿಕೊಂಡರು.
ಇದನ್ನು ಓದಿ:ಸಿಎಂ ಆಗಲು ಯಾವುದೇ ಷರತ್ತು ವಿಧಿಸಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಆಡಳಿತ ನೀಡುವೆ: ಬೊಮ್ಮಾಯಿ