ಬೆಂಗಳೂರು: ಬೊಮ್ಮಾಯಿ ಸರ್ಕಾರದ ಕೊನೆಯ ಬೆಳಗಾವಿ ಅಧಿವೇಶನಕ್ಕೆ ವೇದಿಕೆ ಸಜ್ಜಾಗಿದೆ. ಉತ್ತರ ಕರ್ನಾಟಕ ಭಾಗದ ಜನರ ಆಶೋತ್ತರಗಳನ್ನು ಈಡೇರಿಸುವ ವೇದಿಕೆ ಬೆಳಗಾವಿ ಅಧಿವೇಶನ. ಆದರೆ ಇತ್ತ ಉತ್ತರ ಕರ್ನಾಡಕ ಭಾಗದ ಕಲ್ಯಾಣಕ್ಕಾಗಿನ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ಬಳಕೆಯಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ ಎನ್ನಲಾಗಿದೆ.
ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದಲ್ಲಿ ಎಡವಿದೆ. ಆರ್ಥಿಕ ವರ್ಷದ ಮುಕ್ತಾಯದ ಹಂತಕ್ಕೆ ಬಂದರೂ ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿನ ಅನುದಾನ ಬಳಸುವಲ್ಲಿ ವಿಫಲವಾಗಿದೆ. 2022-23 ಸಾಲಿನ ಎಂಟು ತಿಂಗಳು ಕಳೆದರೂ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿಗೆ ಇನ್ನೂ ವೇಗ ಸಿಕ್ಕಿಲ್ಲ. ಆದ ಪ್ರಗತಿ ತೀರಾ ಶೋಚನೀಯವಾಗಿದೆ.
ಡಾ.ನಂಜುಂಡಪ್ಪ ವರದಿಯಂತೆ ಹಿಂದುಳಿದ ತಾಲೂಕುಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ 12 ವರ್ಷಗಳಿಂದ ಅನುದಾನ ನೀಡಲಾಗುತ್ತಿದೆ. ಸಿಎಂ ಉತ್ತರ ಕರ್ನಾಟಕ ಭಾಗದವರೇ ಆದರೂ ಆ ಪ್ರದೇಶದ ಅಭಿವೃದ್ಧಿಗೆ ನೀಡಬೇಕಾದ ಅನುದಾನ ಮಾತ್ರ ಸರಿಯಾಗಿ ಬಳಕೆ ಆಗಿಲ್ಲ. ಬೊಮ್ಮಾಯಿ ಸರ್ಕಾರ ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ಬಳಕೆಯಲ್ಲಿ ಎಂಟು ತಿಂಗಳು ಕಳೆದರೂ ಅತ್ಯಂತ ಕಳಪೆ ಪ್ರದರ್ಶನ ಮುಂದುವರಿಸಿದೆ.
ವಿಷೇಶ ಅಭಿವೃದ್ಧಿ ಯೋಜನೆಯಡಿ ಪ್ರಗತಿ ಕೇವಲ ಶೇ 16ರಷ್ಟು ಮಾತ್ರ: 2022-23 ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ (SDP) ಬೊಮ್ಮಾಯಿ ಸರ್ಕಾರ ಸದ್ಯ 3,426.37 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಆರ್ಥಿಕ ವರ್ಷದ ಎಂಟು ತಿಂಗಳು ಪೂರ್ಣಗೊಂಡಿದೆ. ಆದರೂ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನದ ಪ್ರಗತಿಗೆ ಇನ್ನೂ ವೇಗ ಕೊಡುವಲ್ಲಿ ಬೊಮ್ಮಾಯಿ ಸರ್ಕಾರ ವಿಫಲವಾಗಿದೆ.
ವಿಶೇಷ ಅಭಿವೃದ್ಧಿ ಯೋಜನೆಯಡಿ ಮೊದಲ ತ್ರೈಮಾಸಿಕದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಬೊಮ್ಮಾಯಿ ಸರ್ಕಾರ ಎರಡನೇ ತ್ರೈ ಮಾಸಿಕದಲ್ಲೂ ಅತ್ಯಂತ ಕಳಪೆ ಪ್ರಗತಿ ಮುಂದುವರಿಸಿತ್ತು. ಇನ್ನೇನು ಮೂರನೇ ತ್ರೈಮಾಸಿಕದಲ್ಲಾದರೂ ಪ್ರಗತಿಗೆ ಚುರುಕು ಸಿಗುತ್ತೆ ಅಂದಕೊಂಡರೆ ಅದೂ ಹುಸಿಯಾಗಿದೆ. 13 ಇಲಾಖೆಗಳಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ 2022-23ಸಾಲಿನ ನವೆಂಬರ್ ವರೆಗೆ ಬಿಡುಗಡೆಯಾದ ಅನುದಾನ ಕೇವಲ 680.83 ಕೋಟಿ ರೂ. ಮಾತ್ರ. ಒಟ್ಟು 3,426.37 ಕೋಟಿ ಅನುದಾನ ಹಂಚಿಕೆಯಲ್ಲಿ ನವೆಂಬರ್ ವರೆಗೆ ಕೇವಲ 680.83 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ.
ದುರಂತ ಅಂದರೆ ಅಲ್ಪ ಬಿಡುಗಡೆ ಮೊತ್ತದಲ್ಲಿ ಅತ್ಯಲ್ಪ ಖರ್ಚು ಮಾಡಲಾಗಿದೆ. ಬಿಡುಗಡೆಯಾದ ಅನುದಾನದ ಪೈಕಿ ನವೆಂಬರ್ ವರೆಗೆ ಖರ್ಚು ಮಾಡಿದ್ದು, ಕೇವಲ 548.51 ಕೋಟಿ ರೂ. ಮಾತ್ರ. ಇನ್ನು ಒಟ್ಟು ಹಂಚಿಕೆ ಮುಂದೆ ಕಳೆದ ಎಂಟು ತಿಂಗಳಲ್ಲಿ ಬೊಮ್ಮಾಯಿ ಸರ್ಕಾರ ವೆಚ್ಚ ಮಾಡಿದ್ದು ಕೇವಲ ಶೇ16.01 ಎಂದು ಸಾಂಖ್ಯಿಕ ಇಲಾಖೆ ಅಂಕಿ - ಅಂಶ ನೀಡಿದೆ.
ಒಟ್ಟು 6 ಇಲಾಖೆಗಳು ಅತ್ಯಂತ ಕಳಪೆ ಪ್ರಗತಿ ತೋರಿದೆ. ಈ ಪೈಕಿ 3 ಇಲಾಖೆಗಳು ವಿಶೇಷ ಅಭಿವೃದ್ಧಿ ಯೋಜನೆಯಡಿ ಯಾವುದೇ ವೆಚ್ಚ ಮಾಡಿಲ್ಲ. ಉಳಿದಂತೆ ಮೂರು ಇಲಾಖೆಗಳು ಒಂದಂಕಿಯಷ್ಟೇ ಖರ್ಚು ಮಾಡಿದೆ.
SDPಯಡಿ ಇಲಾಖಾವಾರು ಪ್ರಗತಿ:
ಇಲಾಖೆಗಳು | ಒಟ್ಟು ಹಂಚಿಕೆ(ಕೋಟಿಗಳಲ್ಲಿ) | ಬಿಡುಗಡೆ | ವೆಚ್ಚ | ಪ್ರಗತಿ(ಶೇಕಡಾವಾರು) |
ಲೋಕೋಪಯೋಗಿ ಇಲಾಖೆ | 70 | 0 | 0 | 0 |
ಕೌಶಲ್ಯಾಭಿವೃದ್ಧಿ ಇಲಾಖೆ | 30 | 7.5 | 0 | 0 |
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ | 75 | 2.5 | 0 | 0 |
ಶಿಕ್ಷಣ ಇಲಾಖೆ | 443.26 | 140.83 | 8.2 | 1.18 |
ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆ | 107.50 | 15 | 2.55 | 2.37 |
ಉನ್ನತ ಶಿಕ್ಷಣ ಇಲಾಖೆ | 50 | 1.50 | 1.50 | 3 |
ಗ್ರಾಮೀಣಾಭಿವೃದ್ಧಿ ಇಲಾಖೆ | 527.67 | 20.29 | 28.53 | 5.41 |
ಯೋಜನಾ ಇಲಾಖೆ | 1,000 | 250 | 39.40 | 3.94 |
ವಸತಿ ಇಲಾಖೆ | 450 | 37.50 | 223.20 | 49.60 |
ಕೃಷಿ ಇಲಾಖೆ | 45 | 20.58 | 18.04 | 40.09 |
ಆರೋಗ್ಯ ಇಲಾಖೆ | 483.20 | 102.17 | 173.17 | 35.84 |
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ | 60 | 19.21 | 18.22 | 30.37 |
ಸಮಾಜ ಕಲ್ಯಾಣ ಇಲಾಖೆ | 85 | 63.75 | 35.88 | 42.21 |
ಇದನ್ನೂ ಓದಿ: ಬಂಪರ್ ಆದಾಯ ಸಂಗ್ರಹ: ಬಜೆಟ್ ಗುರಿ ಮೀರಿ ತೆರಿಗೆ ಸಂಗ್ರಹಿಸುವತ್ತ ಬೊಮ್ಮಾಯಿ ಸರ್ಕಾರ!