ಬೆಂಗಳೂರು: ಮಹಿಳೆಯೊಬ್ಬರು ನಗರದ ಹೆಬ್ಬಾಳದ ಎಸ್ಟೀಮ್ ಮಾಲ್ ಬಸ್ಸ್ಟಾಪ್(Esteem Mall Bus Stop )ನಲ್ಲಿ 6.31 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳಿದ್ದ ಬ್ಯಾಗನ್ನು ಕಳೆದುಕೊಂಡಿದ್ದರು. ಆದರೆ ಬಿಎಂಟಿಸಿ ಸಿಬ್ಬಂದಿ (BMTC staff) ಪ್ರಾಮಾಣಿಕತೆಯಿಂದ ಆ ಬ್ಯಾಗ್ ಮತ್ತೆ ಮಹಿಳೆ ಕೈ ಸೇರಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (Bangalore Metropolitan Transport Corporation ) ಸಿಬ್ಬಂದಿ ಸಂಸ್ಥೆಯ ಅಧಿಕಾರಿಗಳ ಮೂಲಕ ಬ್ಯಾಗನ್ನು ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ರಾಜೇಶ್ವರಿ ಎಂಬುವರು ಬೆಳಗ್ಗೆ ಹೆಬ್ಬಾಳದ ಎಸ್ಟೀಮ್ ಮಾಲ್ ಬಳಿಯ ಬಸ್ ಸ್ಟಾಪ್ ನಲ್ಲಿ ಚಿನ್ನಾಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ಕಳೆದು ಕೊಂಡಿದ್ದರು. ಈ ಬ್ಯಾಗ್ ಬಿಎಂಟಿಸಿ ಸಂಚಾರಿ ನಿಯಂತ್ರಕರಾದ ಪ್ರಕಾಶ್ ಹಾಗೂ ಶಮೀಸಾಬ್ ಕೈಗೆ ಸಿಕ್ಕಿತ್ತು.

ಕೂಡಲೇ ಅದನ್ನು ಬಿಎಂಟಿಸಿ ಮ್ಯಾನೇಜರ್ಗೆ ತಲುಪಿಸಲಾಗಿತ್ತು. ಸಂಸ್ಥೆಯ ಅಧಿಕಾರಿಗಳು ಮಾಲೀಕರನ್ನು ಪತ್ತೆ ಹಚ್ಚಿ ಬ್ಯಾಗನ್ನು ಪ್ರಾಮಾಣಿಕವಾಗಿ ಮಾಲೀಕರಿಗೆ ಮರಳಿಸಿದ್ದಾರೆ. ಆ ಬ್ಯಾಗ್ ನಲ್ಲಿ ಒಂದು ಚಿನ್ನದ ಮಾಂಗಲ್ಯ ಸರ, ಎರಡು ಚಿನ್ನದ ಚೈನ್, ನಾಲ್ಕು ಚಿನ್ನದ ಬಳೆ, ಎರಡು ಕಿವಿಯೋಲೆ, ಮೂರು ಉಂಗುರ, ಒಂದು ಮೊಬೈಲ್ ಫೋನ್ ಹಾಗೂ ಒಂದು ಸಾವಿರ ರೂ. ನಗದು ಹಣವಿತ್ತು ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.
ಬಿಎಂಟಿಸಿ ಸಿಬ್ಬಂದಿಯ ಈ ಪ್ರಾಮಾಣಿಕತೆ ಹಾಗೂ ಕರ್ತವ್ಯ ಪ್ರಜ್ಞೆಗೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನ್ಸುಕುಮಾರ್, ಬ್ಯಾಗ್ ಕಳೆದುಕೊಂಡ ಮಹಿಳೆಯ ಪತಿ ಮಧುಸೂದನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.