ಬೆಂಗಳೂರು: ಮನೆಯ ಹೊರಗೆ ಬಂದ್ರೆ ಸಾಕು ಸುಡುವ ಬಿಸಿಲು, ಮನೆಯೊಳಗಿದ್ದರೆ ಬಿಸಿಲ ಧಗೆ, ಸಾಕಪ್ಪ ಈ ರಣಬಿಸಿಲ ಕಾಟ ಅಂತ ಬೈದುಕೊಳ್ಳುವವರೇ ಹೆಚ್ಚು. ಬೇಸಿಗೆ ಕಾಲಿಟ್ಟಾಗಿದ್ದು ಸೂರ್ಯ ನೆತ್ತಿಯ ಮೇಲೆ ಸುಡುತ್ತಿದ್ದಾನೆ. ಈ ಬಿಸಿಲ ಬೇಗೆಯಲ್ಲಿ ಬಿಎಂಟಿಸಿ ಬಸ್ ಓಡಿಸೋ ಚಾಲಕರ ಸಮಸ್ಯೆ ಹೇಳತೀರದಾಗಿದೆ.
ಬಿರುಬೇಸಿಗೆ ಬಿಎಂಟಿಸಿ ಸಿಬ್ಬಂದಿಗೆ ಅನಾರೋಗ್ಯ ಸಮಸ್ಯೆ ತಂದಿದೆ. ಪ್ರಸಕ್ತ ಸಾಲಿನ ಬೇಸಿಗೆ ಆರಂಭದಲ್ಲೇ ಸುಡುತ್ತಿದ್ದು ಜನಜೀವನದ ಮೇಲೆ ಭಾರಿ ಹೊಡೆತ ನೀಡಿದೆ. ರಣ ಬಿಸಿಲಿನ ಹೊಡೆತದಿಂದಾಗಿ ಬಿಎಂಟಿಸಿ ಬಸ್ ಚಾಲಕರು ಆಸ್ಪತ್ರೆ ಪಾಲಾಗುತ್ತಿದ್ದಾರೆ. ವಿಪರೀತ ಬಿಸಿಲು ಒಂದೆಡೆಯಾದ್ರೆ, ಇಂಜಿನ್ ತಾಪ ತಡೆದುಕೊಂಡು ಸತತ 8 ಗಂಟೆಗಳ ಕಾಲ ಬಸ್ ಚಲಾಯಿಸುವ ಅನಿವಾರ್ಯತೆ ಉಂಟಾಗಿದೆ.
ಅಂದಹಾಗೆ, ಬೆಂಗಳೂರಿನ ದಟ್ಟ ಟ್ರಾಫಿಕ್ ನಡುವೆ ಸತತ 8 ಗಂಟೆಗಳ ಕಾಲ ಬಸ್ ಚಾಲನೆ ಮಾಡುವ ಡ್ರೈವರ್ಗಳು ಆಗಾಗ ಮೂತ್ರ ವಿಸರ್ಜನೆ ಮಾಡಬೇಕಾಗುತ್ತೆ ಎಂಬ ಕಾರಣದಿಂದ ಹೆಚ್ಚಾಗಿ ನೀರು ಕುಡಿಯುವುದಿಲ್ಲ. ಪರಿಣಾಮ, ಡಿಹೈಡ್ರೇಷನ್ ಸಮಸ್ಯೆ ಎದುರಾಗುತ್ತಿದ್ದು, ನೀರು ಕುಡಿಯದೆ ಬಸ್ ಚಲಾಯಿಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಬಿಸಿಲು ಜಾಸ್ತಿಯಾದಗಿನಿಂದ ವಿಕ್ಟೋರಿಯಾ, ಬೌರಿಂಗ್ ಮತ್ತು ಎಂ.ಎಸ್.ರಾಮಯ್ಯ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಬಿಎಂಟಿಸಿ ಬಸ್ ಚಾಲಕರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ.
ಬೇರೆ ತಿಂಗಳಿಗೆ ಹೋಲಿಕೆ ಮಾಡಿದ್ರೆ ಈ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವ ಬಿಎಂಟಿಸಿ ಚಾಲಕರ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಮಂದಿ ಜಠರ ಸಂಬಂಧಿತ ಸಮಸ್ಯೆಗಳಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಮುಖವಾಗಿ ಹೊಟ್ಟೆ ನೋವು, ಡಯೇರಿಯಾ ಮತ್ತು ವಾಂತಿಯಿಂದ ಬಳಲುತ್ತಿರುವ ಚಾಲಕರ ಸಂಖ್ಯೆಯೇ ಹೆಚ್ಚು. ಇದಲ್ಲದೆ ಹಲವು ಮಂದಿಯಲ್ಲಿ ನಿರ್ಜಲೀಕರಣ ಮತ್ತು ಹೀಟ್ ಸ್ಟೋಕ್ ಸಮಸ್ಯೆಗಳು ಕೂಡ ಕಂಡುಬಂದಿವೆ. ಬಹುತೇಕ ಚಾಲಕರು ನೀರಿಗೆ ಸಂಬಂಧಿಸಿದ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದಲ್ಲದೆ ಉಸಿರಾಟ, ಅಸ್ತಮಾ ಮತ್ತು ಅಲರ್ಜಿ ಸಮಸ್ಯೆಯಿಂದಾಗಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನಾರೋಗ್ಯ ಸಮಸ್ಯೆಗಳ ಬಗ್ಗೆ ಸ್ವತಃ ಬಿಎಂಟಿಸಿ ಚಾಲಕರೇ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದು, ನಾವು ಸಂಚರಿಸುವ ಮಾರ್ಗದಲ್ಲಿ ಅತ್ಯಂತ ಹೆಚ್ಚು ಜನ ಪ್ರಯಾಣಿಸುತ್ತಾರೆ. ಹೀಗಾಗಿ, ಕಾಲಿಡಲು ಕೂಡ ಜಾಗವಿರುವುದಿಲ್ಲ. ಬಿರು ಬೇಸಿಗೆ ನಡುವೆ ಅವರನ್ನು ತಳ್ಳಿಕೊಂಡು ಕಾರ್ಯ ನಿರ್ವಹಿಸುವಾಗ ನಿಜಕ್ಕೂ ನರಕ ದರ್ಶನವಾಗುತ್ತದೆ. ಆದರೂ ಅನಿವಾರ್ಯವಾಗಿ ನಾವು ನಮ್ಮ ಕರ್ತವ್ಯ ನಿರ್ವಹಿಸಲೇಬೇಕು ಎಂದಿದ್ದಾರೆ. ಈ ಕುರಿತು ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ಅವರನ್ನು ಕೇಳಿದ್ರೆ ಮಾಹಿತಿ ಕಲೆ ಹಾಕಿ ಸಮಸ್ಯೆ ಬಗೆಹರಿಸೋದಾಗಿ ಹೇಳಿದರು.
ಇದನ್ನೂ ಓದಿ:1 ಕೆಜಿ ಅಕ್ಕಿಗೆ ₹220, 1 ಮೊಟ್ಟೆಗೆ ₹30, ತೆಂಗಿನ ಎಣ್ಣೆಗೆ ₹850! ಶ್ರೀಲಂಕಾದಲ್ಲಿ ಗಗನಕ್ಕೇರಿದ ಅಗತ್ಯವಸ್ತುಗಳ ಬೆಲೆ