ಬೆಂಗಳೂರು: ಬಿಎಂಟಿಸಿ, ಮಹಿಳಾ ಪ್ರಯಾಣಿಕರಿಗೆ ಆಗುತ್ತಿರುವ ಕಿರುಕುಳ, ಕಿರಿಕಿರಿಯನ್ನು ತಪ್ಪಿಸಲು ಬಾಕ್ಸ್ ಇಟ್ ಯೋಜನೆಯನ್ನು ಜಾರಿಗೆ ತಂದಿದೆ.
ಬಾಕ್ಸ್ ಇಟ್ ಅಂದರೆ ದೂರಿನ ಪೆಟ್ಟಿಗೆ. ಬಸ್ಸಿನೊಳಗೆ ಹೇಗೆ ಸಲಹಾ ಪೆಟ್ಟಿಗೆ ಇಟ್ಟಿರುತ್ತಾರೋ ಹಾಗೇ ಇದೀಗ ಬಸ್ ನಿಲ್ದಾಣಗಳಲ್ಲಿ ಇಂತಹ ದೂರಿನ ಪೆಟ್ಟಿಗೆ ಇಡಲು ಮುಂದಾಗಿದೆ. ಈ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಮಹಿಳಾ ಪ್ರಯಾಣಿಕರಿಗೆ ಬಸ್ ನಿಲ್ದಾಣಗಳಲ್ಲಿ ಓಡಾಡುವಾಗ ಯಾವುದೇ ರೀತಿಯ ತೊಂದರೆ, ಕಿರುಕುಳ, ಲೈಂಗಿಕ ಕಿರುಕುಳಕ್ಕೆ ಒಳಗಾಗದಲ್ಲಿ ತಮ್ಮ ಅಹವಾಲುಗಳನ್ನು (Grievance) ದಾಖಲಿಸಲು ಸಂಸ್ಥೆ ಅನುವು ಮಾಡಿಕೊಟ್ಟಿದೆ. ಎಲ್ಲ ಪ್ರಮುಖ 10 ಟಿಟಿಎಂಸಿ ಒಳಗೊಂಡು 57 ಬಸ್ ನಿಲ್ದಾಣಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಲಾಗುತ್ತಿದೆ.
ನಿಲ್ದಾಣದಲ್ಲಿ ರಾತ್ರಿ ವೇಳೆ ಅಸುರಕ್ಷತೆ, ಆತಂಕ ಸೇರಿದಂತೆ ಬಸ್ಗಳ ನಿಲುಗಡೆ ಇಲ್ಲದೇ ಇರುವುದು ಸೇರಿದಂತೆ ಮಹಿಳೆಯರು ತಮ್ಮಗೆ ಆಗುತ್ತಿರುವ ಸಮಸ್ಯೆ ಕುರಿತು ಬಾಕ್ಸ್ -ಇಟ್ ನಲ್ಲಿ ಬರೆದು ಹಾಕಬಹುದು.
ಯಾಕಿದು ಬಾಕ್ಸ್ - ಇಟ್?
ಈಗಾಗಲೇ ಸಲಹಾ ಪಟ್ಟಿಗೆ ಜೊತೆಗೆ ಹೆಲ್ಪ್ ಲೈನ್ ನಂಬರ್ ಕೂಡ ಇದೆ. ಆದರೆ, ಅನೇಕರು ಪ್ರಕರಣಗಳಲ್ಲಿ ತಮ್ಮ ಹೆಸರನ್ನು ಹಾಗೂ ಮಾಹಿತಿಯನ್ನ ಗೌಪ್ಯವಾಗಿಡಬೇಕು ಎಂದು ಬಯಸುತ್ತಾರೆ. ಹೀಗಾಗಿ ಅಂತಹ ಮಹಿಳಾ ಪ್ರಯಾಣಿಕರಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಮುಂದಾಗುತ್ತಿದೆ.