ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಖಾಸಗಿ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಯಶವಂತಪುರದ ಗಾರೆಪ್ಪನಪಾಳ್ಯ ರಸ್ತೆಯ ಹೂವಿನ ಮಾರ್ಕೆಟ್ ಸಮೀಪ ನಡೆದಿದೆ. ಗಂಗಾಧರ್ (21) ಅಪಘಾತ ಸ್ಥಳದಲ್ಲೇ ಸಾವನ್ನಪ್ಪಿದ ಇಂಜಿನಿಯರಿಂಗ್ ವಿದ್ಯಾರ್ಥಿ.
ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಗಂಗಾಧರ್ ಎಚ್ಎಎಲ್ನಲ್ಲಿ ಇಂಟರ್ನ್ಶಿಪ್ಗೆಂದು ಕಾಲೇಜಿನಿಂದ ಸರ್ಟಿಫಿಕೇಟ್ ತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದನು. ಈ ವೇಳೆ, ಬಿಎಂಟಿಸಿ ಬಸ್ ಹಿಂಭಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಗಂಗಾಧರ್ ನೆಲಕ್ಕೆ ಬಿದ್ದಿದ್ದ. ಈ ವೇಳೆ ಬಸ್‌ನ ಹಿಂಬದಿ ಚಕ್ರ ಗಂಗಾಧರನ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಯಶವಂತಪುರ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಹತ್ತು ದಿನಗಳ ಅಂತರದಲ್ಲಿ ಬಿಎಂಟಿಸಿಗೆ ಮೂರನೇ ಬಲಿ: ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಕಳೆದ ಹತ್ತು ದಿನಗಳಲ್ಲಿ ಸಂಭವಿಸಿದ ಮೂರನೇ ಸಾವು ಇದಾಗಿದೆ. ಅಕ್ಟೋಬರ್ 5ರಂದು ಸಂಜೆ ಅಟ್ಟೂರಿನ ಮದರ್ ಡೈರಿ ಬಳಿ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಬಿಎಂಟಿಸಿ ಬಸ್‌ಗೆ ಡಿಕ್ಕಿಯಾಗಿ ನೆಲಕ್ಕೆ ಬಿದ್ದ ಆ್ಯಕ್ಟಿವಾ ಸ್ಕೂಟರ್ ಚಾಲಕ ಭರತ್ ರೆಡ್ಡಿ (23)ಯ ಮೇಲೆ ಬಸ್ ಹರಿದಿತ್ತು. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಘಟನೆಯ ಕುರಿತು ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಿಎಂಟಿಸಿ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿದ್ದ ಘಟನೆ ಅಕ್ಟೋಬರ್ 9 ರಂದು ಗಾರೇಪಾಳ್ಯ ಜಂಕ್ಷನ್ನಲ್ಲಿ ನಡೆದಿತ್ತು. ದೊಡ್ಡಮ್ಮನ ಜೊತೆ ಸ್ಕೂಟರ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಹಿಂಬಂದಿಯಿಂದ ಬಿಎಂಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಅಯಾನ್ ಎಂಬ ಮಗು ನೆಲಕ್ಕೆ ಬಿದ್ದಿತ್ತು. ಈ ವೇಳೆ ಬಸ್ ಚಕ್ರ ಹರಿದು ಮಗು ಮೃತಪಟ್ಟಿತ್ತು. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಮೂರು ವರ್ಷದ ಮಗು ಸಾವು
ಸಾವಿನಿಂದ ಪಾರಾದ ಬೈಕ್ ಸವಾರ- ಗಾಯ(ಆನೇಕಲ್): ಆನೆಕಲ್ನ ಸರ್ಜಾಪುರ ಅಬ್ಬಯ್ಯ ವೃತ್ತದಲ್ಲಿ ಟಿವಿಎಸ್ ಎಕ್ಸೆಲ್ನಲ್ಲಿ ಸಾಗುತ್ತಿದ್ದ ವ್ಯಕ್ತಿ ಪಕ್ಕದಲ್ಲೇ ಸಾಗುತ್ತಿದ್ದ ಟಿಪ್ಪರ್ ಕೆಳಗೆ ಬಿದ್ದಿದ್ದು ಆತನ ಕಾಲಿನ ಮೇಲೆ ಟಿಪ್ಪರ್ ಚಕ್ರ ಹರಿದಿದೆ. ಪರಿಣಾಮ ವ್ಯಕ್ತಿಯ 2 ಕಾಲುಗಳಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡಿನ ಹೊಸೂರು ಬಳಿಯ ಸೇವಗಾನಪಲ್ಲಿಯ 65 ವರ್ಷದ ನಾರಾಯಣರೆಡ್ಡಿ ಗಾಯಗೊಂಡ ವ್ಯಕ್ತಿ ಎನ್ನಲಾಗಿದ್ದು, ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಸರ್ಜಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.