ಬೆಂಗಳೂರು: ಬಿಎಂಟಿಸಿ(BMTC)ಯಿಂದ ವಜಾಗೊಂಡ ನೌಕರರೊಬ್ಬರು ಇಂದಿರಾನಗರದ ಡಿಪೋ-6ರ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಇಂದಿರಾನಗರದ ಡಿಪೋ-6ರ ಡಿಪೋ ಮ್ಯಾನೇಜರ್ ಎದುರಲ್ಲಿಯೇ ಬಿಎಂಟಿಸಿ ಬಸ್ ಚಾಲಕ ನೌಕರ ಕೇಶವ ವಿಷ ಸೇವಿಸಿದ್ದಾರೆ. ಸದ್ಯ ಬಿಎಂಟಿಸಿ ನೌಕರನನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇಶವ ಡಿಪೋ-6ರಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ಏಪ್ರಿಲ್ನಲ್ಲಿ ನಡೆದ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಮುಷ್ಕರದ ವೇಳೆ ಅವರು ವಜಾಗೊಂಡಿದ್ದರು. ಹೀಗಾಗಿ ಕೆಲಸವಿಲ್ಲದೆ ಕೇಶವ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗ್ತಿದೆ.
ಹಳೆ ಬಯ್ಯಪ್ಪನಹಳ್ಳಿಯಲ್ಲಿ ವಾಸವಾಗಿರುವ ಕೇಶವ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನೌಕರರ ಜೀವ ಉಳಿಸಿ:
ಆಸ್ಪತ್ರೆಯಿಂದ ಮಾತನಾಡಿರುವ ಕೇಶವ, ಸಾರಿಗೆ ಸಂಸ್ಥೆಯಲ್ಲಿ ಡಿಪೋ 6ರಲ್ಲಿ ನಾನು ಚಾಲಕನಾಗಿದ್ದೆ. ನನ್ನ ಜೊತೆಗೆ 26 ಮಂದಿ ಚಾಲಕರು ನನ್ನ ಜೊತೆಗೆ ವಜಾ ಆಗಿದ್ದಾರೆ. ನಾವು ಯಾರೂ ತಪ್ಪು ಮಾಡಿಲ್ಲ. ನಾವೆಲ್ಲ ಚಾಲಕರೂ ನೋವಲ್ಲಿದ್ದೇವೆ. ಅವರ ನೋವನ್ನೂ ನೆನೆಸಿಕೊಂಡು ಅದನ್ನು ತಡೆಯಲಾಗದೆ ಡಿಪೋ ಮುಂದೆಯೇ ವಿಷ ಕುಡಿದಿದ್ದೇನೆ. ನನ್ನ ಜೀವ ಹೋದರೂ ಪರವಾಗಿಲ್ಲ, ಇರುವವರನ್ನಾದರೂ ಉಳಿಸಿಕೊಳ್ಳಿ. ನಾವು ನ್ಯಾಯವಾದ ಬೇಡಿಕೆ ಕೇಳಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ, ಉಳಿದ ಎರಡು ಸಾವಿರ ನೌಕರರ ಜೀವ ಉಳಿಸಿ, ಇನ್ಮುಂದೆ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Who is this ಸಿದ್ದರಾಮಯ್ಯ.. ಮಾಜಿ ಸಿಎಂ ಕುಮಾರಸ್ವಾಮಿ ಗರಂ!