ಬೆಂಗಳೂರು : ಸಕಲ ಸೌಲಭ್ಯಗಳಿರುವ ನವ ಬೆಂಗಳೂರನ್ನು ನಿರ್ಮಿಸಲು ಅಗತ್ಯ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಒದಗಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಜಿಎಂ ಹಾಗೂ ಅದ್ವಿತೀಯ ಗ್ರೂಪ್ನ ಐಟಿ ಪಾರ್ಕ್ ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೃಹತ್ ಆಗಿ ಬೆಳೆಯುತ್ತಿರುವ ಬೆಂಗಳೂರನ್ನು ಯೋಜನಾಬದ್ಧವಾಗಿ ಹಾಗೂ ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕಿದೆ.
ಎಲ್ಲ ವರ್ಗದ ಜನರಿಗೆ ಸೌಲಭ್ಯಗಳನ್ನು ತಲುಪಿಸುವ ವಿಶೇಷ ಯೋಜನೆಗಳನ್ನು ಒಟ್ಟಾಗಿ ರೂಪಿಸುತ್ತಿದ್ದೇವೆ. ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲಿ ರೂಪಿಸಲಾದ ಬೆಂಗಳೂರು ವಿಜನ್ 2022 ಯೋಜನೆಯಡಿ 4-5 ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅವುಗಳಿಗೆ ವೇಗವನ್ನು ನೀಡಲು ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಜಿಎಂ ಸಂಸ್ಥೆಯ ಕೊಡುಗೆ : ಜಿ ಎಂ ಸಿದ್ದೇಶ್ವರ ಅವರ ಎರಡು ಮತ್ತು ಮೂರನೇ ಪೀಳಿಗೆ ಯಶಸ್ವಿಯಾಗಿ ವ್ಯಾಪಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಹೆಸರುವಾಸಿಯಾದ ಸಂಸ್ಥೆಯಾಗಿದೆ. ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಿಸಿ, ಆರೋಗ್ಯ ಸೇವೆಗಳನ್ನು ಉತ್ತಮ ರೀತಿ ನೀಡುತ್ತಿದ್ದಾರೆ. ಎಲ್ಲ ರಂಗದಲ್ಲಿಯೂ ಯಶಸ್ವಿಯಾಗಿ ಕಠಿಣ ಪರಿಶ್ರಮದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.
ಇದನ್ನೂ ಓದಿ:ವೀಕೆಂಡ್ ಕರ್ಫ್ಯೂನಲ್ಲಿ ಇಡೀ ಬೆಂಗಳೂರು ಬಂದ್ : ಪೊಲೀಸ್ ಆಯುಕ್ತ ಕಮಲ್ ಪಂತ್
ಇದೀಗ ಐಟಿ ಹಬ್ ನಿರ್ಮಿಸಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಪ್ರಸಿದ್ಧವಾಗಿದ್ದು ಐಟಿಯಿಂದಾಗಿ. ನಾಲ್ಕು ದಿಕ್ಕಿನಲ್ಲಿಯೂ ಮಾಹಿತಿ ತಂತ್ರಜ್ಞಾನ ಉದ್ಯಮ ವಿಸ್ತರಣೆಯಾಗಿದೆ. ಐಟಿ ಉದ್ಯಮಕ್ಕೆ ಹಿಂದಿನ ಸರ್ಕಾರಗಳೂ ಸೇರಿದಂತೆ ನಮ್ಮ ಸರ್ಕಾರವೂ ಮಹತ್ವ ಮತ್ತು ಪ್ರೋತ್ಸಾಹ ನೀಡುತ್ತಾ ಬಂದಿದೆ. ಅತಿ ಹೆಚ್ಚು ಉದ್ಯೋಗ ಲಭಿಸುತ್ತಿರುವುದು ಐಟಿ ವಲಯದಲ್ಲಿ. ವಿದ್ಯಾವಂತರಿಗೆ ದೊಡ್ಡ ಪ್ರಮಾಣದಲ್ಲಿ ಅವಕಾಶಗಳು ದೊರಕುತ್ತಿವೆ ಎಂದರು.
ದುಡಿಯುವ ವರ್ಗದವರ ಕೈಯಲ್ಲಿ ದೇಶದ ಆರ್ಥಿಕತೆ : ಜನರ ಕೈಯಲ್ಲಿ ಉದ್ಯೋಗ ಇದ್ದಾಗ ಮಾತ್ರ ದೇಶ ವೃದ್ಧಿಯಾಗಿ, ಆರ್ಥಿಕತೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಐಟಿ ಸೇವೆಗಳು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅತಿ ಹೆಚ್ಚು ರಫ್ತು ಆಗುತ್ತಿರುವುದು ಐಟಿ ವಲಯದಲ್ಲಿ. ದೇಶದ ಒಟ್ಟು ರಫ್ತಿನ ಪ್ರಮಾಣದಲ್ಲಿ ಶೇ.40ರಷ್ಟು ರಫ್ತು ಬೆಂಗಳೂರಿನಿಂದ ಆಗುತ್ತಿದೆ.
ಹೀಗಾಗಿ, ಬೆಂಗಳೂರು ದೇಶದ ಆರ್ಥಿಕತೆಯ ಪ್ರಮುಖ ಕೇಂದ್ರವಾಗಿದೆ. ಕೋವಿಡ್ ಮುಗಿದು ಆರ್ಥಿಕ ಬೆಳವಣಿಗೆಯಾಗುತ್ತಿರುವ ಸಂದರ್ಭದಲ್ಲಿ ಐಟಿ ಹಬ್ ನಿರ್ಮಾಣವಾಗುತ್ತಿರುವುದು ಬೆಂಗಳೂರಿನ ಬೆಳವಣಿಗೆಯ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದಂತಾಗಿದೆ ಎಂದರು.