ಬೆಂಗಳೂರು: ತನ್ನ ಸರ್ಕಾರಿ ಉದ್ಯೋಗಿ ಅಂಧ ಪತ್ನಿಗೆ ನ್ಯಾಯ ಕೊಡಿಸಿ ಎಂದು ಅಂಧ ಪತಿ ಸಿಎಂ ಮುಂದೆ ಜನಸ್ಪಂದನ ಕಾರ್ಯಕ್ರಮದಲ್ಲಿ ಮೊರೆ ಇಟ್ಟ ಘಟನೆ ನಡೆಯಿತು. ಸಮಸ್ಯೆ ಹೇಳುವಾಗ ಸಿಎಂ ಅವರನ್ನು ಅಂಕಲ್ ಅಂಕಲ್ ಎಂದು ಉಲ್ಲೇಖಿಸಿರುವುದು ನೆರೆದಿದ್ದವರ ಗಮನ ಸೆಳೆಯಿತು.
ಅಂಕಲ್ ನನ್ನ ಹೆಂಡತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಿಡಿಪಿಒ ಆಗಿದ್ದಾರೆ. ಅವರಿಗೆ ಮೇಲಧಿಕಾರಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂಕಲ್. ಹೀಗೆ ಸಿಎಂ ಅವರನ್ನು ಅಂಕಲ್ ಅಂಕಲ್ ಎಂದು ಸಂಬೋಧಿಸುತ್ತ ಸಮಸ್ಯೆ ವಿವರಿಸಿದ್ದು, ಗ್ರಾಮೀಣ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿರುವ ಅಂಧ ವ್ಯಕ್ತಿ ಮಹೇಂದರ್ ಎಂಬುವರು. ಇವರ ಸಮಸ್ಯೆಯನ್ನು ಸಿಎಂ ಸಿದ್ದರಾಮಯ್ಯ ಕೂಡ ಬಹಳ ಸಹನೆಯಿಂದ ಕೇಳಿಸಿಕೊಂಡು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಕಿರುಕುಳ ಆರೋಪ: ''ನಮ್ಮ ಹೆಂಡತಿ ಜಯಲಕ್ಷ್ಮಿಗೆ ಕೂಡ ಕಣ್ಣು ಕಾಣಿಸಲ್ಲ. 2019 ರಿಂದ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಅವಳಿಗೆ ಪ್ರಾಮಾಣಿಕ ಕೆಲಸ ಮಾಡಲು ಆಗಲ್ಲ ಎಂದು ನನಗೆ ಮೊದಲೇ ಗೊತ್ತಿತ್ತು. ಪತ್ನಿಯು ಅಂಗನವಾಡಿಗೆ ಪೂರೈಸಲಾಗುತ್ತಿದ್ದ ಆಹಾರ ಜಪ್ತಿ ಮಾಡಿದ್ದರು. ಗುಣಮಟ್ಟದ ಆಹಾರ ಕೊಡಿ ಎಂದು ಹಾಸನ ಜಿಲ್ಲೆಯಲ್ಲಿ ಹೋರಾಟ ಮಾಡಲು ಪ್ರಾರಂಭಿಸಿದ್ದರು. ಇದರಿಂದ ಉದ್ದೇಶಪೂರ್ವಕವಾಗಿ ಅವರ ಮೇಲೆ ಎರಡು ಎಫ್ಐಆರ್ ಹಾಕಿ, ಎರಡು ಬಾರಿ ವರ್ಗಾವಣೆ ಮಾಡಲಾಗಿದೆ'' ಎಂದು ಆರೋಪಿಸಿದರು.
ಮಾಜಿ ಶಾಸಕರೊಬ್ಬರಿಂದ ನಮಗೆ ಈ ಪರಿಸ್ಥಿತಿ ಬಂದಿದೆ. ಅವರು ಶಾಸಕರಾಗಿದ್ದಾಗ ನನ್ನ ಪತ್ನಿ ಮೇಲೆ ಎರಡು ಎಫ್ಐಆರ್ ದಾಖಲಾಗಿತ್ತು. ಎರಡು ಬಾರಿ ವರ್ಗಾವಣೆ ಆಗಿತ್ತು. ಮಾಜಿ ಶಾಸಕರ ಬಂಟನೇ ಅಂಗನವಾಡಿಗಳಿಗೆ ಗುಣಮಟ್ಟವಿಲ್ಲದ ಆಹಾರ ಸರಬರಾಜು ಮಾಡುತ್ತಿದ್ದ. ಅಂಗನವಾಡಿ ಆಹಾರ ಪೂರೈಕೆ ಅಕ್ರಮದಲ್ಲಿ ಮೇಲಧಿಕಾರಿಯೊಬ್ಬರ ಕೈವಾಡ ಇದ್ದು, ಅವರಿಗೆ ಮಾಜಿ ಶಾಸಕರು ಬೆಂಬಲ ನೀಡಿದ್ದರು ಎಂದು ಮಹೇಂದರ್ ಆರೋಪಿಸಿದರು. ಈ ಪ್ರಕರಣ ಬಗ್ಗೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
''ರಾಜ್ಯ ಸರ್ಕಾರದಲ್ಲಿ ಅಂಧ ಮಹಿಳೆಗೆ ಕೆಲಸ ಮಾಡಲು ಆಗುತ್ತಿಲ್ಲ. ಪ್ರಾಮಾಣಿಕ ಅಧಿಕಾರಿಗಳಿಂದ ಈ ಬಗ್ಗೆ ತನಿಖೆ ನಡೆಸಲು ಮನವಿ ಮಾಡಿದ್ದೇನೆ. ಸಿದ್ದರಾಮಯ್ಯ ಅವರ ಮೇಲೆ ನನಗೆ ನಿರೀಕ್ಷೆ ಇದೆ'' ಎಂದರು. ಅಂಧ ವ್ಯಕ್ತಿಯ ಅಹವಾಲನ್ನು ಸುಮಾರು 15 ನಿಮಿಷ ಸಹನೆಯಿಂದ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ''ಸಿಬಿಐ ತನಿಖೆ ನಡೆಸಲು ಆಗುವುದಿಲ್ಲ. ಆದರೆ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಲು ಸೂಚನೆ ನೀಡುತ್ತೇನೆ'' ಎಂದು ತಿಳಿಸಿದರು.
ಇದನ್ನು ಓದಿ: ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ ಮುಂದಿಟ್ಟ ಮಹಿಳೆ; ಪುತ್ರನ ಹೆಸರಿನ ಟ್ರಸ್ಟ್ಗೆ ನಿವೇಶನ ಮಂಜೂರು ಮಾಡಿದ ಸಿಎಂ