ಬೆಂಗಳೂರು : ಅಂಧತ್ವ ಮೆಟ್ಟಿನಿಂತು ಕ್ರಿಕೆಟ್ ಲೋಕದಲ್ಲಿ ಮಿಂಚುತ್ತಿರುವ ಆಟಗಾರರನ್ನು ಅವರ ಪ್ರತಿಭೆಯಿಂದ ಪ್ರೋತ್ಸಾಹಿಸಬೇಕೇ ವಿನಃ ಅಂತಃಕರಣ ಅಥವಾ ಅನುಕಂಪದಿಂದಲ್ಲ ಎಂದು ಬಾಲಿವುಡ್ ನಟ ಮಿಲಿಂದ್ ಗುಣಾಜಿ ಹೇಳಿದರು.
ನಗರದಲ್ಲಿ ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ), ಸಮರ್ಥನಂ ಟ್ರಸ್ಟ್ ಹಾಗೂ ಇಂಡಸ್‌ಇಂಡ್ ಬ್ಯಾಂಕಿನ ಸಹಯೋಗದಲ್ಲಿ ನಡೆದ ಅಂಧರ ಕ್ರಿಕೆಟ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಂಧರು ಕ್ರಿಕೆಟ್ ಆಡುವುದೇ ಒಂದು ಸೋಜಿಗ. ಅವರು ಪ್ರತಿಭಾವಂತ ಆಟಗಾರರು. ಭಾರತ ಗೆದ್ದಂತೆ ದೇಶದ ಅಂಧರ ತಂಡವೂ ಎಲ್ಲ ಬಗೆಯ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದಿದೆ. ಅವರ ಕ್ರಿಕೆಟ್‌ಗೂ ಸಮಾನವಾದ ಬೆಂಬಲ ದೊರೆಯುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಅಂಧರ ಕ್ರಿಕೆಟ್‌ನಿಂದ ಅಂಧ ಆಟಗಾರರ ಮೇಲಾದ ಸಾಮಾಜಿಕ ಪರಿಣಾಮಗಳ ಕುರಿತ ಅಧ್ಯಯನ ವರದಿಯನ್ನು ಮಿಲಿಂದ್ ಗುಣಾಜಿ ಬಿಡುಗಡೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಎಬಿಐ ಅಧ್ಯಕ್ಷ ಹಾಗೂ ಸಮರ್ಥನಂ ವಿಕಲಚೇತನರ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಡಾ. ಮಹಾಂತೇಶ್ ಜಿ. ಕಿವದಾಸಣ್ಣವರ್, ಈ ವಿಚಾರ ಸಂಕಿರಣ ಅಂಧರ ಕ್ರಿಕೆಟ್‌ಗೆ ಹೊಸ ದಿಕ್ಸೂಚಿಯಾಗಲಿದೆ ಎಂಬ ಭರವಸೆ ಇದೆ. ಹೊಸ ಆಲೋಚನೆಗಳು, ಭಾರತ ಮತ್ತು ಜಾಗತಿಕವಾಗಿ ಅಂಧ ಕ್ರಿಕೆಟ್ ಆಟಗಾರರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳು ಇಲ್ಲಿ ದೊರೆಯುವ ನಿರೀಕ್ಷೆ ಇದೆ. ಅಂಧರ ಕ್ರಿಕೆಟ್‌ನ ಹಾದಿಯಲ್ಲಿ ಈ ವಿಚಾರ ಸಂಕಿರಣ ಮೈಲಿಗಲ್ಲಾಗಲಿದೆʼ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ವಿವಿಧ ಗೋಷ್ಠಿಗಳಲ್ಲಿ ತಜ್ಞರು ಮತ್ತು ಸಲಹೆಗಾರರು ಅಂಧರ ಕ್ರಿಕೆಟ್ ಕ್ಷೇತ್ರವನ್ನು ಇನ್ನಷ್ಟು ವಿಸ್ತರಿಸುವ ಮತ್ತು ಪರಿಣಾಮಕಾರಿಯಾಗಿಸುವ ಕುರಿತು ಚರ್ಚೆ ನಡೆಸಿದರು. ಸಾಮಾಜಿಕ ಮುಖ್ಯವಾಹಿನಿ ಮತ್ತು ಅಂಧ ಕ್ರಿಕೆಟ್ ಆಟಗಾರರು, ಆಟದ ಮಾನಸಿಕ ಅಂಶಗಳು, ಅಂಧ ಆಟಗಾರರು ಮತ್ತು ಕ್ಷೇತ್ರದ ಪ್ರಗತಿಯಲ್ಲಿ ಸಮರ್ಥನಂ ಟ್ರಸ್ಟ್ ವಹಿಸಿದ ಪಾತ್ರ, ಕ್ರೀಡೆಗೆ ಕಾರ್ಪೋರೆಟ್ ಕಂಪನಿಗಳು ನೀಡಿದ ಕೊಡುಗೆ, ಪರಿಣಾಮಕಾರಿ ಸಹಯೋಗಗಳು, ಇತ್ಯಾದಿ ಅಂಶಗಳ ಕುರಿತು ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಕೆಲವು ಹೆಸರಾಂತ ಅಂಧ ಕ್ರಿಕೆಟ್ ಆಟಗಾರರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಇಂಡಸ್‌ಇಂಡ್ ಬ್ಯಾಂಕ್‌ನ ಸಿಎಸ್‌ಆರ್ ಮತ್ತು ಕಾರ್ಪೊರೇಟ್ ಸೇವೆಗಳ ಮುಖ್ಯಸ್ಥರಾದ ಅದ್ವೈತ್ ಹೆಬ್ಬಾರ್, ಮೈಂಡ್‌ಟ್ರೀನ ಚೀಫ್ ಪೀಪಲ್ ಆಫೀಸರ್ ಪಣೀಶ್ ರಾವ್, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುಜಿತ್ ಸೋಮಸುಂದರ್, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯರಾದ ಶಾಂತಾ ರಂಗಸ್ವಾಮಿ, ನಟ ಮಿಳಿಂದ್ ಗುಣಾಜಿ, ಆಲರ್ಜನ್ ಸಿಎಸ್‌ಆರ್‌ನ ಕೃಪಾ ವಿಲಿಯಮ್ಸ್ ಮತ್ತು ಸಿಎಬಿಐ ಅಧಿಕಾರಿಗಳು ಉಪಸ್ಥಿತರಿದ್ದರು.