ಬೆಂಗಳೂರು : ಇದ್ದಕ್ಕಿದ್ದಂತೆ ಮನೆಯಲ್ಲಿ ಭಾರಿ ಶಬ್ಧದೊಂದಿಗೆ ಸ್ಫೋಟ ಸಂಭವಿಸಿದ ಪರಿಣಾಮ ವ್ಯಕ್ತಿಯೊಬ್ಬ ಗಾಯಗೊಂಡಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಗಲಹಟ್ಟಿ ಗ್ರಾಮದ ಮನೆಯಲ್ಲಿ ನಡೆದಿದೆ. ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಮನೆಯಲ್ಲಿದ್ದ ಪವನ್(23) ಎಂಬ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪವನ್ ಹಲವು ತಿಂಗಳಿನಿಂದ ಕೊಡಗಲಹಟ್ಟಿಯಲ್ಲಿರುವ ರಮೇಶ್ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದ. ಕ್ರಷರ್ ಕೆಲಸ ಮಾಡುತ್ತಿದ್ದ ಪವನ್, ಕ್ರಷರ್ನಲ್ಲಿ ಬಳಸುತ್ತಿದ್ದ ಸ್ಫೋಟಕಗಳನ್ನು ಮನೆಯಲ್ಲಿ ಅಕ್ರಮ ದಾಸ್ತಾನು ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಇನ್ನು, ಸ್ಥಳಕ್ಕೆ ಚಿಕ್ಕಜಾಲ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಸ್ಫೋಟದಿಂದಾಗಿ ಸುತ್ತಮುತ್ತಲಿನ ಮನೆಯವರು ಆತಂಕಕ್ಕೆ ಒಳಗಾಗಿದ್ದು, ಬೆಳಗ್ಗೆ 7.50ರ ಸುಮಾರಿಗೆ ಭಾರಿ ಶಬ್ಧ ಕೇಳಿ ಬಂತು. ತಕ್ಷಣವೇ ರಮೇಶ್ ಎಂಬುವರ ಮನೆಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎಂದು ಕೆಲವರು ಹೇಳಿದ್ದರಿಂದ, ಅಲ್ಲಿಗೆ ಹೋಗಿ ನೋಡಿದಾಗ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಪೊಲೀಸರಿಗೆ ಫೋನ್ ಮಾಡಿ ಅವರನ್ನು ಕರೆಸಿದ್ವಿ. ಬಳಿಕ ಫೈರ್ ಇಂಜಿನ್ನಿಂದ ಬೆಂಕಿ ಆರಿಸಲಾಯ್ತು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.ಆದರೆ, ಸ್ಫೋಟಗೊಂಡಿದ್ದು ಸಿಲಿಂಡರ್ ಅಲ್ಲ ಎಂಬುದು ತಿಳಿದು ಬಂದಿದೆ.