ಬೆಂಗಳೂರು: ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣಕ್ಕೆ ಹುರಿಯಾಳುಗಳ ಪಟ್ಟಿ ಪ್ರಕಟಿಸಿರುವ ಬಿಜೆಪಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ. ಈ ಹಿಂದಿನ ಉಪಚುನಾವಣೆಗಳ ತಂತ್ರಗಾರಿಕೆಯ ಮುಂದುವರೆದ ಭಾಗವಾಗಿ ಎಲ್ಲ ಕಾರ್ಯತಂತ್ರವನ್ನು ಹೆಣೆಯುತ್ತಿದೆ. ಅದಕ್ಕಾಗಿಯೇ ಬೆಳಗಾವಿಯಲ್ಲಿ ಅನುಕಂಪದ ಅಸ್ತ್ರ, ಬಸವಕಲ್ಯಾಣದಲ್ಲಿ ಜಾತಿ ಅಸ್ತ್ರ ಮತ್ತು ಮಸ್ಕಿಯಲ್ಲಿ ನೀರಾವರಿ ಅಸ್ತ್ರದ ಪ್ರಯೋಗಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಬೆಳಗಾವಿ ತಂತ್ರಗಾರಿಕೆ:
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷದಲ್ಲಿ ಬಂಡಾಯ ಏಳದಂತೆ ನೋಡಿಕೊಂಡು ಟಿಕೆಟ್ ಹಂಚಿಕೆ ಮಾಡುವಲ್ಲಿ ಸಫಲವಾಗಿರುವ ಬಿಜೆಪಿ, ಸುರೇಶ್ ಅಂಗಡಿ ಅವರ ನಿಧನದ ಅನುಕಂಪವನ್ನೇ ಪ್ರಬಲ ಅಸ್ತ್ರವನ್ನಾಗಿ ಮಾಡಿಕೊಳ್ಳಲು ಹೊರಟಿದೆ. ಹಾಗಾಗಿಯೇ ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್ ನೀಡಿದೆ. ಈ ಮೂಲಕ ಅನುಕಂಪದ ಅಲೆಯನ್ನು ಲಾಭವನ್ನಾಗಿಸಿಕೊಳ್ಳಲು ಹೊರಟಿದೆ.
ಈಗಾಗಲೇ ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಸಿಎಂ ಯಡಿಯೂರಪ್ಪ 50 ಕೋಟಿ ರೂ.ಗಳ ಅನುದಾನ ಪ್ರಕಟಿಸಿದ್ದಾರೆ. ಆ ಮೂಲಕ ಬೆಳಗಾವಿಯಲ್ಲಿನ ಮರಾಠಿಗರ ಮತಬುಟ್ಟಿಗೆ ಕೈಹಾಕಿದ್ದು, ಬಿಜೆಪಿ ಪರ ಮರಾಠಿಗರು ನಿಲ್ಲುವಂತೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಸುರೇಶ್ ಅಂಗಡಿ ನಿಧನದ ಅನುಕಂಪ, ಲಿಂಗಾಯತ ಸಮುದಾಯ ಅದೇ ಸಮುದಾಯ ಅಭ್ಯರ್ಥಿ ಮಂಗಳಾ ಸುರೇಶ್ ಅಂಗಡಿ ಪರ ನಿಲ್ಲಲಿದ್ದಾರೆ ಎನ್ನುವುದು, ಮರಾಠಿ ನಿಗಮ ರಚನೆಯಿಂದ ಮರಾಠಿಗರು ಬಿಜೆಪಿ ಪರ ಮತ ಹಾಕಲಿದ್ದಾರೆ ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆ.
ಬಸವಕಲ್ಯಾಣ ತಂತ್ರಗಾರಿಕೆ:
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಶಿಕಾರಿಗೆ ಬಿಜೆಪಿ ಜಾತಿ ಅಸ್ತ್ರ ಪ್ರಯೋಗಿಸಿದೆ. ಮರಾಠಿ ಹಾಗೂ ಲಿಂಗಾಯತ ಸಮುದಾಯವನ್ನು ತನ್ನೆಡೆ ಸೆಳೆಯುವ ಕೆಲಸವನ್ನು ಚುನಾವಣೆ ಘೋಷಣೆಗೂ ಮೊದಲೇ ಮಾಡಿಕೊಂಡಿದೆ. ಶಿರಾ ಕ್ಷೇತ್ರದ ಚುನಾವಣೆ ವೇಳೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ರಚನೆ ಫಲಪ್ರದವಾದಂತೆ ಬಸವಕಲ್ಯಾಣ ಕ್ಷೇತ್ರದ ಚುನಾವಣೆ ದೃಷ್ಟಿಯಿಂದ ಮರಾಠಾ ಅಭಿವೃದ್ಧಿ ನಿಗಮ ರಚಿಸಿ ಕ್ಷೇತ್ರದ ಮರಾಠಿ ಸಮುದಾಯದ ಮತಬುಟ್ಟಿಗೆ ಬಿಜೆಪಿ ಕೈ ಹಾಕಿದೆ. ಇದರ ಜೊತೆಗೆ ಲಿಂಗಾಯತ ಮತಗಳನ್ನು ಉಳಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಬಸವಕಲ್ಯಾಣದಲ್ಲಿ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಜನವರಿಯಲ್ಲೇ ಸಿಎಂ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಎರಡು ವರ್ಷದಲ್ಲೇ ನೂತನ ಅನುಭವ ಮಂಟಪವನ್ನು ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ ಮಾಡಿಸುವ ಘೋಷಣೆ ಮಾಡಿದ್ದಾರೆ. ಆ ಮೂಲಕ ಲಿಂಗಾಯತ ಸಮುದಾಯದ ಓಲೈಕೆ ಮಾಡಿರುವ ಸಿಎಂ, ತಮ್ಮ ಸಮುದಾಯ ಬಿಜೆಪಿ ಜೊತೆಯಲ್ಲೇ ನಿಲ್ಲುವಂತೆ ಮಾಡುವ ಪ್ರಯತ್ನ ನಡೆಸಿದ್ದಾರೆ.
ಅಭ್ಯರ್ಥಿ ವರ್ಚಸ್ಸಿನ ಪ್ಲಸ್ ಪಾಯಿಂಟ್:
ಬಿಜೆಪಿ ಅಭ್ಯರ್ಥಿ ಶರಣು ಕಲಗಾರ್ ಲಾಕ್ಡೌನ್ ನಂತರ ಸಾಕಷ್ಟು ಮುನ್ನಲೆಗೆ ಬಂದಿದ್ದಾರೆ. ಸ್ವಂತ ಹಣದಿಂದ ಕ್ಷೇತ್ರದಲ್ಲಿ ಮೂರ್ನಾಲ್ಕು ತಿಂಗಳು ಉಚಿತ ಫುಡ್ ಕಿಟ್ ನೀಡಿ ಮನೆ ಮಾತಾಗಿದ್ದಾರೆ. ಸ್ಥಳೀಯವಾಗಿ ಉತ್ತಮ ವರ್ಚಸ್ಸನ್ನು ಗಳಿಸಿಕೊಂಡಿದ್ದಾರೆ. ಬಿಜೆಪಿಯ ಸಾಂಪ್ರದಾಯಿಕ ಮತಗಳು, ಅಭ್ಯರ್ಥಿ ವರ್ಚಸ್ಸು, ಮರಾಠಾ ನಿಗಮ, ಅನುಭವ ಮಂಟಪ ಶಿಲಾನ್ಯಾಸ ಪ್ಲಸ್ ಆಗಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ.
ಮಸ್ಕಿ ತಂತ್ರಗಾರಿಕೆ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಪ್ರತಾಪ್ ಗೌಡ ಪಾಟೀಲ್ಗೆ ಬಿಜೆಪಿ ಟಿಕೆಟ್ ನೀಡಿದೆ. ಕಳೆದ ಬಾರಿಯ ಬಿಜೆಪಿ ಪರಾಜಿತ ಅಭ್ಯರ್ಥಿಯೇ ಈ ಬಾರಿ ಬಿಜೆಪಿ ವಿರುದ್ಧ ಕಣಕ್ಕಿಳಿದಿದ್ದು, ಬಿಜೆಪಿ ಮತಗಳು ಚದುರದಂತೆ ಕೇಸರಿ ನಾಯಕರು ಬೈ ಎಲೆಕ್ಷನ್ ಮಾಸ್ಟರ್ ಬಿ.ವೈ. ವಿಜಯೇಂದ್ರರನ್ನು ಕ್ಷೇತ್ರದ ಚುನಾವಣಾ ಪ್ರಚಾರದ ಕಣಕ್ಕೆ ಕಳುಹಿಸಿಕೊಟ್ಟಿದ್ದಾರೆ. ಯುವ ನಾಯಕರಾದ ವಿಜಯೇಂದ್ರ ಈ ಹಿಂದೆ ನಡೆದಿದ್ದ ಕೆ.ಆರ್. ಪೇಟೆ ಮತ್ತು ಶಿರಾ ಕ್ಷೇತ್ರದಲ್ಲಿ ಮತಗಳ ಕ್ರೂಢೀಕರಣ ಮಾಡಿ ಸಕ್ಸಸ್ ಆಗಿದ್ದಾರೆ. ಅದರಂತೆ ಬಿಜೆಪಿ ಸಾಂಪ್ರದಾಯಿಕ ಮತಗಳನ್ನು ಕ್ರೋಢೀಕರಿಸುವ ಹೊಣೆಗಾರಿಕೆ ನೀಡಲಾಗಿದೆ.
ಇನ್ನು ನೀರಾವರಿ ಅಸ್ತ್ರ ಬಿಜೆಪಿಯಿಂದ ಮಸ್ಕಿಯಲ್ಲಿ ಅನುಸರಿಸುತ್ತಿರುವ ಸೂಪರ್ ಪೊಲಿಟಿಕಲ್ ಸ್ಟ್ರಾಟಜಿಯಾಗಿದೆ. ಶಿರಾದ ಮದಲೂರು ಕೆರೆಗೆ ನೀರು ಪೂರೈಸುವ ಯೋಜನೆ ಘೋಷಣೆ ಮಾಡಿದ್ದಕ್ಕೆ ಮತದಾರರು ಬಿಜೆಪಿಗೆ ಮಣೆ ಹಾಕಿದ್ದರು. ಹಾಗಾಗಿ ಅದೇ ಅಸ್ತ್ರದ ಪ್ರಯೋಗವನ್ನೂ ಇಲ್ಲಿ ಮಾಡಲಾಗಿದೆ. ಚುನಾವಣೆ ಘೋಷಣೆಗೂ ಮೊದಲೇ ಮಸ್ಕಿ ನಾಲಾ ಆಧುನೀಕರಣಕ್ಕೆ 52.54 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆಯನ್ನು ಸಿಎಂ ನೀಡಿದ್ದಾರೆ. ಅಲ್ಲದೆ ಕ್ಷೇತ್ರದ ಎಲ್ಲ ನೀರಾವರಿ ಯೋಜನೆ ಈಡೇರಿಸುವ ಭರವಸೆ ನೀಡಿ ಮತದಾರರ ಮನಗೆಲ್ಲಲು ಮುಂದಾಗಿದೆ.
ಓದಿ:ಸತೀಶ್ ಜಾರಕಿಹೊಳಿ ಅಣ್ಣ ಕಾಂಗ್ರೆಸ್ಗೆ ದೊಡ್ಡ ಶಕ್ತಿ: ಲಕ್ಷ್ಮೀ ಹೆಬ್ಬಾಳ್ಕರ್
ಅಭ್ಯರ್ಥಿ ವರ್ಚಸ್ಸು: ಮೂಲ ಬಿಜೆಪಿಗರಾದ ಪ್ರತಾಪ್ ಗೌಡ ಪಾಟೀಲ್, 2008 ರಲ್ಲಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದು, 2013, 2018 ರಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಬಾರಿಸಿದ್ದಾರೆ. ನಾಲ್ಕನೇ ಬಾರಿ ಮತ್ತೆ ಮಾತೃ ಪಕ್ಷದಿಂದ ಕಣಕ್ಕಿಳಿದಿದ್ದು, ವೈಯಕ್ತಿಕ ವರ್ಚಸ್ಸು ಪ್ಲಸ್ ಆಗುವ ಸಾಧ್ಯತೆ ಇದೆ. ಬಿಜೆಪಿ ಸಾಂಪ್ರದಾಯಿಕ ಮತ, ಅಭ್ಯರ್ಥಿ ವರ್ಚಸ್ಸು, ನೀರಾವರಿ ಅಸ್ತ್ರ ಮತ್ತು ವಿಜಯೇಂದ್ರ ತಂತ್ರಗಾರಿಕೆ ಮಸ್ಕಿ ಶಿಕಾರಿಗೆ ಬಿಜೆಪಿಯ ರಣತಂತ್ರವಾಗಿದೆ.
ಚುನಾವಣಾ ಉಸ್ತುವಾರಿಗಳು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಂಸದ ಭಗವಂತ ಖೂಬಾ, ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್, ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕರ್, ಈಶ್ವರ ಸಿಂಗ್ ಠಾಕೂರ್, ಅಮರನಾಥ ಪಾಟೀಲ್ ಉಸ್ತುವಾರಿಗಳಾಗಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಸಚಿವ ಬಿ. ಶ್ರೀರಾಮುಲು, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ನೇಮಿರಾಜ್ ನಾಯಕ್, ರಾಜುಗೌಡ, ಡಾ. ಶಿವರಾಜ ಪಾಟೀಲ ಉಸ್ತುವಾರಿಗಳಾಗಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಸಚಿವರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ ಮತ್ತು ಬಸವರಾಜ್ ಯಂಕಂಚಿ ಉಸ್ತುವಾರಿಗಳಾಗಿದ್ದಾರೆ.
ಒಟ್ಟಿನಲ್ಲಿ ಮೂರೂ ಕ್ಷೇತ್ರದ ಉಪಚುನಾವಣೆಯಲ್ಲಿ ಒಂದೊಂದು ರೀತಿಯ ರಣ ತಂತ್ರವನ್ನು ಬಿಜೆಪಿ ಹೆಣೆದಿದೆ. ಹಿಂದಿನ ಉಪಕದನ ಸಮರದ ಗೆಲುವಿನ ಆತ್ಮವಿಶ್ವಾಸದಲ್ಲಿ ಪ್ರಚಾರದ ಅಖಾಡಕ್ಕಿಳಿಯುತ್ತಿರುವ ಬಿಜೆಪಿ ತಂತ್ರಗಾರಿಕೆಗೆ ಮತದಾರರು ಯಾವ ರೀತಿಯ ಮನ್ನಣೆ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.