ಬೆಂಗಳೂರು: ವಿಧಾನಸಭಾ ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ತನ್ನದೇ ಆದ ಕಾರ್ಯತಂತ್ರ ರೂಪಿಸುವಲ್ಲಿ ನಿರತವಾಗಿದ್ದು, ಹೊಸಕೋಟೆ ಮತ್ತು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಒಕ್ಕಲಿಗರ ಮತ ಬ್ಯಾಂಕ್ಗೆ ಹೊಸ ತಂತ್ರಗಾರಿಕೆ ಮಾಡಿದೆ.
ಈಗಾಗಲೇ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದ್ದು, ಅದರಲ್ಲಿ ಕೊಂಚ ಬದಲಾವಣೆ ಮೂಲಕ ದೊಡ್ಡ ಲಾಭಕ್ಕೆ ಬಿಜೆಪಿ ಮುಂದಾಗಿದೆ. ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಹೊಸಕೋಟೆ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಬದಲು, ಯಶವಂತಪುರ ಕ್ಷೇತ್ರದ ಉಸ್ತುವಾರಿಯಾಗಿದ್ದ ಮಾಜಿ ಎಂಎಲ್ ಸಿ ಅಶ್ವಥ್ ನಾರಾಯಣ್ ಅವರನ್ನು ನಿಯೋಜಿಸಲಾಗಿದೆ. ಹೊಸಕೋಟೆ ಕ್ಷೇತ್ರದ ಉಸ್ತುವಾರಿಯಾಗಿದ್ದ ಡಿಸಿಎಂ ಅಶ್ವತ್ಥ ನಾರಾಯಣ್ ಅವರನ್ನು ಕೆ.ಆರ್. ಪೇಟೆ ಕ್ಷೇತ್ರಕ್ಕೆ ನಿಯೋಜಿಸಲಾಗಿದೆ.
ಕೆ.ಆರ್.ಪೇಟೆ ಈಗ ಸೂಕ್ಷ್ಮ ಕ್ಷೇತ್ರವಾಗಿದೆ. ಅಲ್ಲದೇ ಅಲ್ಲಿನ ಲೋಕಲ್ ಸೆಂಟಿಮೆಂಟ್ ಕೂಡಾ ವರ್ಕ್ ಆಗಲಿದೆ ಎಂಬುದು ಬಿಜೆಪಿಗೆ ಗೊತ್ತಾಗಿದ್ದು, ಮೂಲ ಮಂಡ್ಯದವರಾಗಿರುವ, ಜೊತೆಗೆ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣದಿಂದ ಡಿಸಿಎಂ ಅಶ್ವತ್ಥನಾರಾಯಣ್ ಅವರನ್ನು ಕೆ.ಆರ್.ಪೇಟೆಗೆ ಮಾಜಿ ಎಂಎಲ್ಸಿ ಅಶ್ವತ್ಥನಾರಾಯಣ್ ಕೂಡ ಒಕ್ಕಲಿಗರಾಗಿದ್ದು, ಅವರನ್ನು ಹೊಸಕೋಟೆ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿ ರಾಜಕೀಯ ತಂತ್ರಗಾರಿಕೆ ಹೆಣೆಯಲಾಗುತ್ತಿದೆ ಎನ್ನಲಾಗಿದೆ.
ಬಿಜೆಪಿ ಮತಗಳ ಜೊತೆಯಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಒಕ್ಕಲಿಗ ಸ್ಟ್ರಾಟಜಿ ಅನುಸರಿಸುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.