ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಆರ್ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಶಿರಾ ಕ್ಷೇತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಜಯಭೇರಿ ಬಾರಿಸಲಿದ್ದಾರೆಂದು ಅಂದಾಜಿಸಲಾಗಿದೆ.
ವಿಧಾನ ಪರಿಷತ್ನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಲಿದೆ ಎಂದು ಗುಪ್ತಚರ ಇಲಾಖೆಯು ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ ಎಂದು ತಿಳಿದು ಬಂದಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಹೆಚ್. ಕುಸುಮಾ ನಡುವೆ ತೀವ್ರ ಪೈಪೋಟಿ ಕಂಡು ಬಂದರೂ ಕೂಡ 30 ಸಾವಿರ ಮತಗಳ ಅಂತರದಿಂದ ಬಿಜೆಪಿಗೆ ಜಯ ಸಿಗಲಿದೆ ಎನ್ನಲಾಗ್ತಿದೆ.
ತುಮಕೂರಿನ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಆಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆಯಿದ್ದರೂ ಕೂಡ ಬೆರಳಣಿಕೆಯ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರಗೆ ಗೆಲುವು ಸಿಗಲಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಚಿವರಾಗಿದ್ದ ಟಿ.ಬಿ ಜಯಚಂದ್ರ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದರು. ಇದೇ ಜಿಲ್ಲೆಯ ಕೈ ನಾಯಕರಾದ ಜಿ. ಪರಮೇಶ್ವರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ನಡುವೆ ಇದ್ದ ಭಿನ್ನಾಭಿಪ್ರಾಯವನ್ನು ವರಿಷ್ಠರು ಶಮನಗೊಳಿಸಿ ಒಂದುಗೂಡುವಂತೆ ಮಾಡಿ ಒಟ್ಟಿಗೆ ಮತಯಾಚಿಸುತ್ತಿರುವುದು ಕಾಂಗ್ರೆಸ್ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಂದೆ ಮೂಡಲಗಿರಿಯಪ್ಪ ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಹಾಗೂ ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ. ಅನಾರೋಗ್ಯ ಕಾರಣಕ್ಕಾಗಿ ಜೆಡಿಎಸ್ ಶಾಸಕ ಸತ್ಯನಾರಾಯಣ ನಿಧನ ಹಿನ್ನೆಲೆಯಲ್ಲಿ ಪತ್ನಿ ಅಮ್ಮಾಜಮ್ಮ ಜೆಡಿಎಸ್ನಿಂದ ಸ್ಪರ್ಧಿಸುತ್ತಿದ್ದು, ಅನುಕಂಪ ಮತಗಳಾಗಿ ಪರಿವರ್ತನೆಯಾಗಲಿದೆಯಾ ಎಂಬ ಕುತೂಹಲವಿದೆ.
ತ್ರಿಕೋನ ಸ್ಪರ್ಧೆ ನಡುವೆಯೂ ಬಿಜೆಪಿ ಅಭ್ಯರ್ಥಿಗೆ ಅಲ್ಪ ಮತಗಳಿಂದ ಹಿನ್ನೆಡೆಯಾಗಲಿದೆ ಎಂದು ಗುಪ್ತಚರ ಇಲಾಖೆಯು ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭಾ ಪರಿಷತ್ನ ನಾಲ್ಕು ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿಯ ಎಸ್. ವಿ. ಸಂಕನೂರು, ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ನ ಶರಣಪ್ಪ ಮಟ್ಟೂರ, ಈಶಾನ್ಯ ಕ್ಷೇತ್ರದಿಂದ ಬಿಜೆಪಿಯ ಶಶಿಲ್ ನಮೋಶಿ, ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಗೆಲುವಿನ ನಗೆ ಬೀರಲಿದ್ದಾರಂತೆ.
ಇನ್ನೂ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿದ್ದ ಶ್ರೀನಿವಾಸ್ ಹಾಗೂ ಲೇಪಾಕ್ಷಿ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರಿಂದ ಬಿಜೆಪಿ ಆಭ್ಯರ್ಥಿ ಚಿದಾನಂದಗೌಡಗೆ ಬೀಳುವ ಮತಗಳು ವಿಭಜನೆಯಾಗಲಿದೆ. ಇದರ ಲಾಭ ಜೆಡಿಎಸ್ ಅಭ್ಯರ್ಥಿ ಆರ್. ಚೌಡರೆಡ್ಡಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಿಜೆಪಿಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರಕ್ಕೆ ಗುಪ್ತಚರ ಇಲಾಖೆ ವರದಿ ನೀಡಿರುವುದಾಗಿ ತಿಳಿದು ಬಂದಿದೆ.