ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಆಡಳಿತಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದರು. ವಿಧಾನಸೌಧಲ್ಲಿ ಮಾತನಾಡಿದ ಅವರು, ನಿರೀಕ್ಷೆಯಂತೆ ಗುಜರಾತ್ನಲ್ಲಿ ಅಭೂತಪೂರ್ವ ಗೆಲುವು ಸಿಕ್ಕಿದೆ. ಸತತ ಏಳನೇ ಬಾರಿ ಗೆಲುವು ಸಾಧಿಸುವುದು ಸಾಧನೆಯೇ. ಗುಜರಾತ್ ಜನ ಪಿಎಂ ಮೋದಿ ನಾಯಕತ್ವದಲ್ಲಿ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶದ 10-12 ಕ್ಷೇತ್ರಗಳಲ್ಲಿ ಕಡಿಮೆ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುಂದಿದ್ದಾರೆ. ಹಾಗಾಗಿ ಅಲ್ಲಿ ಇನ್ನೂ ಸ್ಪಷ್ಟ ಫಲಿತಾಂಶ ಬಂದಿಲ್ಲ ಎಂದರು.
ಮುಂದಿನ ಐದು ತಿಂಗಳು ದೇಶದಲ್ಲಿ ಬೇರೆ ಯಾವುದೇ ರಾಜ್ಯಗಳಲ್ಲಿ ಚುನಾವಣೆ ಇಲ್ಲ. ಈ ನಿಟ್ಟಿನಲ್ಲಿ ನಮ್ಮ ಕಾರ್ಯತಂತ್ರ ರಚನೆ ಮಾಡುತ್ತೇವೆ. ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಇಂದಿನಿಂದ ಐದು ತಿಂಗಳಲ್ಲಿ ಪಕ್ಷವನ್ನು ಹೇಗೆ ಅಧಿಕಾರಕ್ಕೆ ತರಬೇಕು ಎಂಬ ಬಗ್ಗೆ ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಹೇಳಿದರು.
ಗುಜರಾತ್ ಫಲಿತಾಂಶ ರಾಜ್ಯದಲ್ಲೂ ಬರಲಿದೆ- ಈಶ್ವರಪ್ಪ: ಗುಜರಾತ್ ಫಲಿತಾಂಶ ರಾಜ್ಯದಲ್ಲೂ ಬರಲಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಶಿವಮೊಗ್ಗದಲ್ಲಿ ಗುಜರಾತ್ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿ, ಗುಜರಾತ್ ರಾಜ್ಯ ಸಾಕಷ್ಟು ಅಭಿವೃದ್ಧಿಯಾಗಿದೆ. ಗುಜರಾತ್ಗೆ ಹೋಗಿ ನೋಡಿದರೆ ಅಲ್ಲಿನ ಅಭಿವೃದ್ಧಿ ಗೊತ್ತಾಗುತ್ತೆ ಎಂದು ತಿಳಿಸಿದರು.
ಸಚಿವ ವಿ ಸೋಮಣ್ಣ ಹೇಳಿಕೆ: ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಇಡೀ ವಿಶ್ವ ಭಾರತವನ್ನು ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಗುಜರಾತಿನ ಚುನಾವಣೆ ಭವ್ಯ ಭಾರತಕ್ಕೆ ಹಿಡಿದ ಕೈಗನ್ನಡಿ. ಹೀಗಾಗಿ ವಿಶೇಷವಾಗಿ ಈ ಚುನಾವಣೆಗೆ ಶ್ರಮಿಸಿರುವ ನರೇಂದ್ರ ಮೋದಿ, ಜೆ ಪಿ ನಡ್ಡಾ ಹಾಗೂ ಅಮಿತ್ ಶಾರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಗುಜರಾತ್ನ ಚುನಾವಣೆಯಲ್ಲಿನ ಜನಾದೇಶ ಖಂಡಿತವಾಗಿಯೂ ರಾಜ್ಯದ ಮೇಲೆ ಪ್ರಭಾವವನ್ನು ಬೀರಲಿದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ ಮೇಲೆ ಗುಜರಾತ್ ಫಲಿತಾಂಶ ಪರಿಣಾಮ ಬೀರಲಿದೆ: ಸಿಎಂ