ಬೆಂಗಳೂರು: ಬಿಜೆಪಿಯವರು ನಾವು ಐದು ಗ್ಯಾರಂಟಿ ಜಾರಿ ಮಾಡಲ್ಲ ಎಂದುಕೊಂಡಿದ್ದರು. ಆದರೆ ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ ಅವರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಸತ್ಯ ಯಾವಾಗಲೂ ಕಹಿಯಾಗಲಿದೆ, ಅದನ್ನು ತಡೆದುಕೊಳ್ಳಲಾಗದೇ ಸರ್ಕಾರದ ಉತ್ತರ ಕೇಳದೆ ಸಭಾತ್ಯಾಗ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾಪದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡುವ ವೇಳೆ ಬಿಜೆಪಿ ಸಭಾತ್ಯಾಗ ಮಾಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, 1983 ರಿಂದ ನಾನು ಸದನದಲ್ಲಿದ್ದೇನೆ, ನಾವು ಕೂಡ ರಾಜ್ಯಪಾಲರ ಭಾಷಣ, ಬಜೆಟ್ ಮೇಲೆ ಮಾತನಾಡುತ್ತಿದ್ದೆವು. ಆದರೆ ಪೀಠ ಹೇಳಿದ ಕೂಡಲೇ ಕುಳಿತುಕೊಳ್ಳುತ್ತಿದ್ದೆವು. ಆದರೆ ಬಿಜೆಪಿ ಬೇಜವಾಬ್ದಾರಿಯುತ ಪ್ರತಿಪಕ್ಷವಾಗಿದೆ. ನಾನು ತಪ್ಪು ಹೇಳಿದ್ದರೆ ಅದನ್ನು ಕೇಳಬಹುದು, ಆದರೆ ನನ್ನ ಮಾತು ಕೇಳುವ ಸೌಜನ್ಯವೇ ಇವರಿಗೆ ಇಲ್ಲ. ಮುಖ್ಯಮಂತ್ರಿ ಮಾತನಾಡುವಾಗ ಪದೇ ಪದೇ ಎದ್ದು ನಿಂತು ಅಡ್ಡಿಪಡಿಸುತ್ತಿದ್ದಾರೆ. ಪೀಠಕ್ಕೂ ಗೌರವ ಕೊಡಲ್ಲ ಎಂದರೆ ಏನು? ಮುಖ್ಯಮಂತ್ರಿಯಾಗಿ ಬಡವರ ಪರ ಮಾತನಾಡುತ್ತಿದ್ದೇವೆ. ಇವರೆಲ್ಲಾ ಅಡ್ಡಿ ಪಡಿಸಿ ಬಡವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ನಡೆಗೆ ಅಸಮಧಾನ ವ್ಯಕ್ತಪಡಿಸಿದರು.
ಬೇರೆಯವರಿಗೆ ಕೊಡ್ತಾರೆ ನಮಗೇಕೆ ಇಲ್ಲ?: ಈಶಾನ್ಯ ರಾಜ್ಯಕ್ಕೆ ಅಕ್ಕಿ ಕೊಡುತ್ತಿದ್ದಾರೆ, ನಾವು ಬೇಡ ಎನ್ನಲ್ಲ. ಆದರೆ, ನಮಗೆ ಯಾಕೆ ಕೊಡಲ್ಲ ಎನ್ನುತ್ತಿದ್ದಾರೆ. ನಮಗೆ ಇಲ್ಲ ಎನ್ನುತ್ತಾರೆ ಎಥೆನಾಲ್ ತಯಾರು ಮಾಡಲು 24 ರೂ. ನಂತೆ ಕೊಟ್ಟಿದ್ದಾರೆ. ಅಕ್ಕಿ ನಮಗೆ ಕೊಡಲ್ಲ ಎಂದು ಉತ್ತರಿಸಿದ ಮೇಲೆ ಇ ಆಕ್ಷನ್ ಕರೆದಿದ್ದಾರೆ. ಅಂದರೆ ಅಕ್ಕಿ ಇದೆ ಎಂದೇ ಅರ್ಥವಲ್ಲವೇ? ನಾವೇನು ಪುಕ್ಕಟ್ಟೆ ಕೇಳಲಿಲ್ಲ, ಹಣ ಕೊಡುತ್ತೇವೆ ಎಂದರೂ ಅಕ್ಕಿ ಇಟ್ಟುಕೊಂಡು ಇಲ್ಲ ಎಂದರೆ ಇದರ ಉದ್ದೇಶ ಏನು? ಇವರನ್ನ ಬಡವರ ವಿರೋಧಿಗಳು ಎಂದು ಕರೆಯಬೇಕೋ ಬೇಡವಾ? ಅಕ್ಕಿ ಕೇಂದ್ರದಿಂದ ಸಿಗದಿದ್ದಾಗ ಹಲವು ರಾಜ್ಯಗಳ ಸಿಎಂ ಜೊತೆ ಮಾತುಕತೆ ನಡೆಸಿದರೂ ಅಕ್ಕಿ ಸಿಗಲಿಲ್ಲ, ಮುಕ್ತ ಮಾರುಕಟ್ಟೆಯಿಂದ ಖರೀದಿಗೆ ಟೆಂಡರ್ ಕರೆದಿದ್ದೇವೆ. ಆದರೆ ಮಾತು ಕೊಟ್ಟ ಹಿನ್ನೆಲೆಯಲ್ಲಿ ಈ ತಿಂಗಳು ಪಡಿತರದಾರರಿಗೆ ಹಣ ಕೊಡುತ್ತಿದ್ದೇವೆ. ಬಡವರು ಹೊಟ್ಟೆ ತುಂಬಾ ಊಟ ಮಾಡುತ್ತಾರೆ ಎನ್ನುವ ಹೊಟ್ಟೆ ಉರಿ ಇವರಿಗೆ. ಬಡವರು ಅರೆಹೊಟ್ಟೆಯಲ್ಲಿದ್ದರೆ ಅವರಿಗೆ ಸಂತೋಷ. ಅದಕ್ಕೆ ಜನ ಅವರಿಗೆ ಬುದ್ಧಿ ಕಲಿಸಿದ್ದಾರೆ. ಈಗಲಾದರೂ ಬುದ್ಧಿ ಕಲಿಯಬೇಕಲ್ಲ. ಪ್ರತಿಪಕ್ಷ ಆಗಿ ಕೆಲಸ ಮಾಡಬೇಕಲ್ಲ, ಇನ್ನು ಬುದ್ಧಿ ಕಲಿತಿಲ್ಲ ಎಂದು ಟೀಕಿಸಿದರು.
ಕೊಟ್ಟ ಎಲ್ಲ ಭರವಸೆ ಈಡೇರಿಸುತ್ತೇವೆ: ಮೂರು ಗ್ಯಾರಂಟಿ ಜಾರಿಯಾಗಿದ್ದು, ನಾಲ್ಕನೆಯದ್ದು ಜಾರಿ ಹಂತದಲ್ಲಿದೆ, ಐದನೆ ಗ್ಯಾರಂಟಿ ಯುವ ನಿಧಿ ಬಾಕಿ ಇದೆ. ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ಮೂರು ಸಾವಿರ ಕೊಡುತ್ತೇವೆ. ಡಿಪ್ಲೊಮಾ ಮಾಡಿದವರಿಗೆ ಒಂದೂವರೆ ಸಾವಿರ ಕೊಡಲಿದ್ದೇವೆ. ಉದ್ಯೋಗ ತರಬೇತಿ, ಕೌಶಲ್ಯ ತರಬೇತಿ ಕೊಡಲಿದ್ದೇವೆ. ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದರು, ಆದರೆ ಕೊಡಲಿಲ್ಲ. ಕೆಲಸಕ್ಕೆ ಅರ್ಜಿ ಹಾಕಲೂ ನಿರುದ್ಯೋಗಿಗಳಿಗೆ ಹಣವಿರಲ್ಲ. ಹಾಗಾಗಿ ನಾವು ಹಣ ಕೊಡುತ್ತಿದ್ದೇವೆ ಎಂದು ಯುವನಿಧಿ ಯೋಜನೆ ಬಗ್ಗೆ ಸಮರ್ಥಿಸಿಕೊಂಡರು.
ನಮ್ಮ ಐದು ಗ್ಯಾರಂಟಿಗಳಿಗೆ ಒಟ್ಟು 52 ಸಾವಿರ ಕೋಟಿ ಬೇಕು, ಕಮರ್ಷಿಯಲ್ ತೆರಿಗೆ, ಅಬಕಾರಿ ತೆರಿಗೆ ಹೆಚ್ಚು ಮಾಡಿದ್ದೇವೆ. ವಾಹನ ತೆರಿಗೆ, ಗಣಿಗಾರಿಕೆ, ಮುದ್ರಾಂಕ ತೆರಿಗೆ ಹೆಚ್ಚಿಸಿದ್ದೇವೆ. ಬಡವರ ಮೇಲೆ ತೆರಿಗೆ ಹಾಕದೆ ಯೋಜನೆಗೆ ಹಣ ಹೊಂದಿಸಿಕೊಳ್ಳುತ್ತಿದ್ದೇವೆ. ಮೊದಲ ಬಾರಿ 12,522 ಕೋಟಿ ವಿತ್ತೀಯ ಕೊರತೆ ಬಜೆಟ್ ಮಂಡಿಸಿದ್ದೇನೆ. ಈ ಹಿಂದೆ 13 ಬಜೆಟ್ ಮಂಡಿಸಿದ್ದೆ, ಯಾವುದೂ ಕೊರತೆ ಬಜೆಟ್ ಮಂಡಿಸಿರಲಿಲ್ಲ, ಇದೊಂದೇ ಕೊರತೆ ಬಜೆಟ್ ಮಂಡಿಸಿದ್ದು, ಮುಂದಿನ ವರ್ಷ ಮತ್ತೆ ಉಳಿತಾಯ ಬಜೆಟ್ ಮಂಡಿಸುತ್ತೇನೆ ಎಂದರು.
ಯಾರು ಯಾರು ಯಾವ ಭರವಸೆ ನೀಡಿ ಎಷ್ಟು ಈಡೇರಿಸಿದ್ದಾರೆ ಎಂದು ಒಂದೇ ವೇದಿಕೆಯಲ್ಲಿ ಚರ್ಚೆಗೆ ಬನ್ನಿ, 2013ರ ನಮ್ಮ ಪ್ರಣಾಳಿಕೆ, 2018ರ ನಿಮ್ಮ ಪ್ರಣಾಳಿಕೆ ಇಟ್ಟುಕೊಂಡು ಬನ್ನಿ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ಶೇ10 ರಷ್ಟೂ ಭರವಸೆಯನ್ನು ಅವರು ಈಡೇರಿಸಿಲ್ಲ. ನುಡಿದಂತೆ ನಡೆಯದವರು ಬಿಜೆಪಿಯವರು ಎಂದು ಟೀಕಿಸಿದರು. ನಾವು ಎಲ್ಲ ಕಾರ್ಯಕ್ರಮಗಳಿಗೆ ಹಣ ಇಟ್ಟಿದ್ದೇವೆ. ಅನುಷ್ಠಾನಕ್ಕೆ ತರುತ್ತಿದ್ದೇವೆ. ನವೆಂಬರ್, ಡಿಸೆಂಬರ್ ವೇಳೆಗೆ ಯುವನಿಧಿ ಯೋಜನೆ ಜಾರಿ ಮಾಡುತ್ತೇವೆ. 35,410 ಕೋಟಿ ಈ ವರ್ಷ ಬೇಕು. ಅಷ್ಟೂ ಹಣವನ್ನು ಹೊಂದಿಸಿಕೊಂಡು ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಿದ್ದೇವೆ. ಇದು ನಮ್ಮ ಬದ್ಧತೆ. ನಾವು ಜನರಿಗೆ ಭರವಸೆ ನೀಡಿದ್ದೆವು, ಅದನ್ನು ಈಡೇರಿಸುತ್ತೇವೆ ಎಂದರು.
ಇನ್ಮೇಲೆ ನೀವು ಯಾರೂ ಆತಂಕದಿಂದ ಬದುಕಬೇಕಿಲ್ಲ, ಎಲ್ಲರಿಗೂ ರಕ್ಷಣೆ, ಕಾನೂನು ಸುವ್ಯವಸ್ಥೆ, ಊಟ, ಹಣ ಒದಗಿಸುತ್ತೇವೆ. ಇದು ಒಳ್ಳೆಯ ಕಾರ್ಯಕ್ರಮ ಅಲ್ಲವಾ? ಇದನ್ನ ರಾಜ್ಯಪಾಲರ ಭಾಷಣದ ಮೂಲಕ ಜನತೆಗೆ ತಿಳಿಸಿದ್ದೇವೆ. ಗ್ಯಾರಂಟಿ ಈಡೇರಿಸಿದ್ದೇವೆ, ಯಾವಾಗಲೂ ಸತ್ಯ ಕಹಿಯಾಗಲಿದೆ. ಅದನ್ನು ತಡೆದುಕೊಳ್ಳಲಾಗದೆ ಸಭಾತ್ಯಾಗ ಮಾಡಿದ್ದಾರೆ ಎಂದರು. ಸಿದ್ದರಾಮಯ್ಯ ಉತ್ತರದ ನಂತರ ವಿಧಾನ ಪರಿಷತ್ನಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾಪವನ್ನು ಧ್ವನಿ ಮತದ ಮೂಲಕ ವಿಧಾನ ಪರಿಷತ್ ಅಂಗೀಕಾರ ನೀಡಿತು. ಬಳಿಕ ಸದನವನ್ನು ಸೋಮವಾರ ಬೆಳಗ್ಗೆ 11 ಗಂಟೆವರೆಗೂ ಮುಂದೂಡಿಕೆ ಮಾಡಲಾಯಿತು.
ಇದನ್ನೂ ಓದಿ: ಬಿಜೆಪಿ ಕುಟುಕುತ್ತಲೇ ಪಂಚ ಗ್ಯಾರಂಟಿ ಸಮರ್ಥಿಸಿಕೊಂಡ ಸಿಎಂ: ಸರ್ಕಾರದ ಉತ್ತರ ಖಂಡಿಸಿ ಬಿಜೆಪಿ ಸಭಾತ್ಯಾಗ