ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ಕಾಂಗ್ರೆಸ್ ಹಾಗೂ ರೈತರು ಹಮ್ಮಿಕೊಂಡಿದ್ದ ರಾಜಭವನ ಚಲೋ ಪ್ರತಿಭಟನೆ ವೇಳೆ ಶಾಸಕಿ ಸೌಮ್ಯ ರೆಡ್ಡಿ ಮಹಿಳಾ ಪೊಲೀಸ್ ಕಾನ್ಸ್ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವೀಟ್ ಮಾಡುವ ಮೂಲಕ ಸೌಮ್ಯ ರೆಡ್ಡಿ ಕಾಲೆಳೆದಿದೆ.
ಬಿಜೆಪಿ ಟ್ವೀಟ್ನಲ್ಲಿ, 'ಇದೇನು ಸೌಮ್ಯ ರೆಡ್ಡಿ ಅವರೇ, ಲೇಡಿ ರೌಡಿ ಆಗಲು ಹೊರಟಿದ್ದೀರಾ?, ಡಿ ಕೆ ಶಿವಕುಮಾರ್ ಅವರ ಕುಮ್ಮಕ್ಕಿನಿಂದ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿ ಜನ ಸಾಮಾನ್ಯರಿಗೆ ತೊಂದರೆ ನೀಡಿದ್ದೀರಿ, ಪೊಲೀಸರ ಮೇಲೆ ಹಲ್ಲೆ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಕೊಡುವ ಗೌರವವೇ? ಎಂದು ಟೀಕೆ ಮಾಡಿದೆ.
ಕಾಂಗ್ರೆಸ್ ಪ್ರತಿಭಟನೆ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸರಣಿ ಟ್ವೀಟ್ ಮಾಡಿದ್ದಾರೆ. "ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ರಾಜ್ಯದ ರೈತರು ಹಲವು ವರ್ಷಗಳಿಂದ ಕಾಂಟ್ರಾಕ್ಟ್ ಫಾರ್ಮಿಂಗ್ನ ಲಾಭ ಪಡೆಯುತ್ತಿದ್ದಾರೆ.
ಇದೇ ವ್ಯವಸ್ಥೆಯನ್ನು ದೇಶಾದ್ಯಂತ ಜಾರಿಗೆ ತರಲು ಹೊರಟಾಗ ಕಾಂಗ್ರೆಸ್ ಯಾಕೆ ವಿರೋಧ ಮಾಡುತ್ತಿದೆ?, ಅಲ್ಲಿ ರೈತರಿಗೆ ಸಹಾಯವಾಗಿದೆ ಅಂದ್ರೆ, ಎಲ್ಲಾ ರೈತರಿಗೂ ಸಹಾಯ ಆಗಲೇಬೇಕು ಅಲ್ಲವೇ? ' ಎಂದು ತಿಳಿಸಿದ್ದಾರೆ.
ಎಪಿಎಂಸಿಗಳಲ್ಲಿ ಆಗುತ್ತಿರುವ ಶೋಷಣೆಯನ್ನು ತಡೆಯಲು ರೈತರಿಗೆ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಆಗಬೇಕು ಎಂದು ದೇಶದ ಸಂಸತ್ತಿನಲ್ಲಿ ಟೊಮ್ಯಾಟೊ, ಆಲೂಗಡ್ಡೆಯ ಉದಾಹರಣೆ ಕೊಟ್ಟಿದ್ದ ರಾಹುಲ್ ಗಾಂಧಿ, ಈಗ ಅದೇ ಕಾನೂನನ್ನು ವಿರೋಧ ಮಾಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಪಿಎಂಸಿ ವ್ಯವಸ್ಥೆಯಿಂದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಪತ್ರ ಬರೆದಿದ್ದರು. ಆದರೆ, ಈಗ ನೂತನ ಕೃಷಿ ಕಾಯಿದೆಗಳ ಮುಖಾಂತರ ಕೇಂದ್ರ ಸರ್ಕಾರ ಅವರೇ ಗುರುತಿಸಿದ ತೊಂದರೆಗಳನ್ನು ಹೋಗಲಾಡಿಸಿದಾಗ ವಿರೋಧ ಮಾಡುತ್ತಿರುವುದ್ಯಾಕೆ? ಎಂದು ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.