ಬೆಂಗಳೂರು: ಕರ್ನಾಟಕದಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗಲು ಕಾಂಗ್ರೆಸ್ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಇಂತಹ ದೊಂಬಿಕೋರರನ್ನು ಬಿ ರಿಪೋರ್ಟ್ ಹಾಕಿ ಬಿಡಿಸುತ್ತಿದ್ದರು. ಈ ಘಟನೆಯಲ್ಲಿ ಭಾಗವಹಿಸಿದ್ದವರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಟ್ಟಿದೆ. ಕೆಎಫ್ಡಿ, ಎಸ್ಡಿಪಿಐ ಹಾಗೂ ಪಿಎಫ್ಐ ನಂತಹ ಸಂಘಟನೆಗಳಿಗೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ರಕ್ಷಣೆ ಕೊಡುವ ಕೆಲಸ ಮಾಡಿತ್ತು. ಇದು ಪೂರ್ವನಿಯೋಜಿತ ಘಟನೆ ಎಂದು ಕಿಡಿಕಾರಿದರು.
ಫೇಸ್ಬುಕ್ ಪೋಸ್ಟ್ ಮಾಡಿದ ಯುವಕನ ವಿರುದ್ಧ ಕಾನೂನು ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಪ್ರಕರಣ ನಡೆಯುತ್ತಿರಲಿಲ್ಲ. ಗಲಭೆಯಲ್ಲಿ ಭಾಗಿಯಾಗಿರುವವರ ಸರ್ಕಾರಿ ಸವಲತ್ತುಗಳನ್ನು ವಾಪಸ್ ಪಡೆಯಬೇಕು. ಗಲಭೆ ಮಾಡಿದವರ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳಿದರು.
ಈ ಘಟನೆ ನಡೆದಾಗ ತಮ್ಮ ಶಾಸಕರಾಗಿದ್ದರೂ ಕಾಂಗ್ರೆಸ್ನವರು ಖಂಡಿಸಿಲ್ಲವೇಕೆ? ನಾವು ಪಕ್ಷ ಬಿಟ್ಟು ಆ ಶಾಸಕರ ಪರ ನಿಂತಿದ್ದೇವೆ. ದಲಿತ ಸಮುದಾಯದ ಶಾಸಕರ ಮನೆ ಮೇಲೆ ದಾಳಿ ನಡೆಯಬಾರದಿತ್ತು. ನಿಮ್ಮ ಶಾಸಕ ಸಜ್ಜನ ಹೌದೋ, ಅಲ್ಲವೋ ನೀವೇ ಹೇಳಿ? ಗಲಭೆ ಮಾಡಿದವರು ಅಮಾಯಕರು ಅಂತಾ ನಿಮ್ಮ ಪಕ್ಷದವರೇ ಹೇಳಿದ್ದಾರೆ. ಹಾಗಾದರೆ ನಿಮ್ಮ ಶಾಸಕ ಅಮಾಯಕ ಅಲ್ಲವೇ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಎಸ್ಡಿಪಿಐನಿಂದ ಬಿಜೆಪಿಗೆ ಲಾಭ ಇದೆ. ಸರ್ಕಾರ ನಿಷೇಧ ಮಾಡಲ್ಲ ಎಂಬ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಅವರ ಸರ್ಕಾರವೂ ಇತ್ತು. ರಾಮಲಿಂಗಾ ರೆಡ್ಡಿ ಅವರೂ ಗೃಹ ಸಚಿವರಾಗಿದ್ದರು. ಎಸ್ಡಿಪಿಐ ಇರುವುದರಿಂದ ಬಿಜೆಪಿಗೆ ಲಾಭ ಅನ್ನುವುದಾದರೆ ಆಗಲೇ ಯಾಕೆ ಅವರು ಆ ಸಂಘಟನೆಯನ್ನು ನಿಷೇಧ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.
ನಮ್ಮ ಮೇಲೆ ಆರೋಪ ಮಾಡುವುದಕ್ಕೆ ಕಾಂಗ್ರೆಸ್‌ಗೆ ನೈತಿಕತೆಯಿಲ್ಲ. ಈ ಹಿಂದೆ ಇಂತಹ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಿದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆ ಮೇಲೆ ಧ್ವಜ ಹಾರಿಸಿದ ಕಿಡಿಗೇಡಿಯನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಕಟೀಲ್ ಒತ್ತಾಯಿಸಿದರು.