ಬೆಂಗಳೂರು : ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಮರುದಿನವೇ ಮಠಗಳ ಭೇಟಿಯನ್ನು ಬಿ ವೈ ವಿಜಯೇಂದ್ರ ಆರಂಭಿಸಿದ್ದು, ರಾಜ್ಯ ಪ್ರವಾಸಕ್ಕೂ ಮೊದಲು ಆಚಾರ್ಯರ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಅಧಿಕಾರ ಸ್ವೀಕಾರಕ್ಕೂ ಮುನ್ನ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಸಿದ್ದಲಿಂಗೇಶ್ವರನ ಸನ್ನಿಧಿಗೆ ತೆರಳಿದ್ದ ವಿಜಯೇಂದ್ರ ಇದೀಗ ಸಿರಿಗೆರೆ ಸೇರಿದಂತೆ ಹಲವು ಮಠ ಹಾಗೂ ಗುರುಪೀಠಗಳಿಗೆ ಭೇಟಿ ಕೊಡುತ್ತಿದ್ದಾರೆ.
ಇಂದು ಬೆಳಗ್ಗೆ ರಸ್ತೆ ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ. ಮೊದಲಿಗೆ ಚಿತ್ರದುರ್ಗದ ಹಿರಿಯ ಬಿಜೆಪಿ ನಾಯಕ ಜೆ ಹೆಚ್ ತಿಪ್ಪಾರೆಡ್ಡಿ ಅವರ ಮನೆಗೆ ಭೇಟಿ ನೀಡಲಿದ್ದಾರೆ. ನಂತರ ಕೋಟೆನಾಡಿನ ಮುರುಘ ರಾಜೇಂದ್ರ ಮಠಕ್ಕೆ ಭೇಟಿ ನೀಡಿ ಮುರುಘರಾಜೇಂದ್ರನ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ನಂತರ ಕೃಷ್ಣ ಯಾದವನಂದ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಲಿದ್ದು, ಜಗದ್ಗುರು ಮಾದಾರ ಚನ್ನಯ್ಯ ಮಠ, ಜಗದ್ಗುರು ಸಿದ್ದರಾಮೇಶ್ವರ ಸಂಸ್ಥಾನ ಭೋವಿ ಗುರುಪೀಠಕ್ಕೆ ಭೇಟಿ ಕೊಟ್ಟು ಪೂಜ್ಯರ ದರ್ಶನ ಪಡೆಯಲಿದ್ದಾರೆ.
ಮಧ್ಯಾಹ್ನ ಸಿರಿಗೆರೆ ಬೃಹನ್ಮಠಕ್ಕೆ ಭೇಟಿ ನೀಡಿ ತರಳಬಾಳು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದುಕೊಳ್ಳಲಿದ್ದಾರೆ. ನಂತರ ಹೊಸದುರ್ಗದ ಚಿನ್ಮೂಲಾದ್ರಿ ಭಗೀರಥ ಗುರುಪೀಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಸಾಣೆಹಳ್ಳಿಯಲ್ಲಿರುವ ತರಳಬಾಳು ಬೃಹನ್ನಠದ ಶಾಖಾಮಠಕ್ಕೆ ಭೇಟಿ ಪಂಡಿತಾರಾಧ್ಯ ಶ್ರೀಗಳಿಂದ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ಇದಾದ ಬಳಿಕ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ, ಕನಕ ಗುರು ಪೀಠ ಶಾಖಾಮಠಕ್ಕೆ ಭೇಟಿ ನೀಡಲಿದ್ದು, ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ನಾಳೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದ್ದು, ಸಭೆ ನಂತರ ರಾಜ್ಯ ಪ್ರವಾಸ ಆರಂಭಿಸಬೇಕಿದೆ. ರಾಜ್ಯ ಪ್ರವಾಸಕ್ಕೂ ಮುನ್ನ ನಾಡಿನ ಮಠ, ಗುರುಪೀಠಗಳ ದರ್ಶನ ಪಡೆದು ನಂತರ ರಾಜ್ಯ ಪ್ರವಾಸ ಆರಂಭಿಸಲು ವಿಜಯೇಂದ್ರ ನಿರ್ಧರಿಸಿದ್ದಾರೆ. ರಾಜ್ಯ ಪ್ರವಾಸದ ವೇಳೆಯಲ್ಲಿಯೂ ಆಯಾ ಭಾಗದ ಮಠ ಗುರುಪೀಠಗಳಿಗೆ ಭೇಟಿ ನೀಡಲಿದ್ದಾರೆ.
ರಾಜ್ಯ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಹೈಕಮಾಂಡ್ ನಾಯಕರಿಂದ ಆಯ್ಕೆಯಾದ ಬಿ ವೈ ವಿಜಯೇಂದ್ರ ಅವರ ಪದಗ್ರಹಣ ಬುಧವಾರದಂದು ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ನಡೆಯಿತು. ನಿಯೋಜಿತ ಅಧ್ಯಕ್ಷರ ಜೊತೆಗೆ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಪುತ್ರನನ್ನು ಗ್ರ್ಯಾಂಡ್ ಆಗಿ ಲಾಂಚ್ ಮಾಡಿದ ಯಡಿಯೂರಪ್ಪ: ಮಾಸ್ ಇಮೇಜ್ ಟಚ್ ನೀಡಿದ ಪದಗ್ರಹಣ ಸಮಾರಂಭ