ಬೆಂಗಳೂರು: ಖ್ಯಾತ ತಮಿಳು ಕವಿ ಹಾಗೂ ತತ್ವಜ್ಞಾನಿ ತಿರುವಳ್ಳುವರ್ ಜಯಂತಿ ಹಿನ್ನೆಲೆಯಲ್ಲಿ ನಗರದ ಹಲಸೂರು ಲೇಕ್‌ನಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಲಾರ್ಪಣೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಪ್ರತಿಮೆ ಅನಾವರಣದ ಹಿಂದಿನ ಬಿ.ಎಸ್.ಯಡಿಯೂರಪ್ಪನವರ ಪರಿಶ್ರಮವನ್ನು ಸ್ಮರಿಸಿದರು.
ನಂತರ ಮಾತನಾಡಿದ ವಿಜಯೇಂದ್ರ, "ಕಳೆದ ಹಲವು ದಶಕಗಳಿಂದ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಆಗಬೇಕು, ಚೆನ್ನೈನಲ್ಲಿ ಸರ್ವಜ್ಞರ ಪ್ರತಿಮೆ ಅನಾವರಣಗೊಳ್ಳಬೇಕೆಂದು ನಿರಂತರವಾಗಿ ಹೋರಾಟ ನಡೆಯುತ್ತಿತ್ತು. ಹಲವು ದಶಕಗಳ ಹೋರಾಟಕ್ಕೆ ಉತ್ತರ ಸಿಗದ ಸಂದರ್ಭದಲ್ಲಿ 2009ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಹಾಗೂ ತಮಿಳಿಗರು ಸಹೋದರಂತೆ ಇರಬೇಕು ಎಂಬ ಉದ್ದೇಶದಿಂದ ಪ್ರತಿಮೆ ನಿರ್ಮಿಸಲಾಗಿತ್ತು" ಎಂದರು.
"ತಿರುವಳ್ಳುವರ್ ಪ್ರತಿಮೆವನ್ನು 18 ವರ್ಷಗಳ ಕಾಲ ಮುಚ್ಚಿಡಲಾಗಿತ್ತು. ಅನಾವರಣಗೊಳಿಸಲು ಅವಕಾಶ ಸಿಕ್ಕಿರಲಿಲ್ಲ. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ತಮಿಳುನಾಡಿನ ಸಿಎಂ ಜೊತೆ ಚರ್ಚಿಸಿದ್ದರು. ಬಳಿಕ ಇಲ್ಲಿ ತಿರುವಳ್ಳುವರ್, ಚೆನೈನಲ್ಲಿ ಸರ್ವಜ್ಞರ ಪ್ರತಿಮೆ ಅನಾವರಣ ಮಾಡಲಾಯಿತು" ಎಂದು ಹೇಳಿದರು.
ಸಂಸದ ಪಿ.ಸಿ.ಮೋಹನ್, ಶಾಸಕ ಸಿ.ಕೆ.ರಾಮಮೂರ್ತಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ದಾವಣಗೆರೆ: ಸರಳವಾಗಿ ನೆರವೇರಿದ ಹರ ಜಾತ್ರಾ ಮಹೋತ್ಸವ